ಸಚಿವ ಮಧು ಬಂಗಾರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿವಮೊಗ್ಗ:ನಮ್ಮ ಐದು ಗ್ಯಾರಂಟಿ ಯೋಜನೆ ಬಗ್ಗೆ ಹೀಯಾಳಿಸುತ್ತಿದ್ದ ಬಿಜೆಪಿ ನಾಯಕರು, ಈಗ ದಿನಾ ಬೆಳಗ್ಗೆ ಎದ್ದು ತಕ್ಷಣ ಮೋದಿ ಗ್ಯಾರಂಟಿ ಎನ್ನುತ್ತಾ ಬರುತ್ತಿದ್ದಾರೆ. ಇವರಿಗೆ ಏನೂ ಅನ್ನಿಸುವುದಿಲ್ಲವೇ ಎಂದು ಬಿಜೆಪಿ ವಿರುದ್ದ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
ಶಿವಮೊಗ್ಗದ ತಮ್ಮ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ಲೋಕಸಭಾ ಚುನಾವಣೆಯಲ್ಲಿ ಸರ್ಜಿಕಲ್ ಸ್ಟ್ಕೈಕ್ ಮಾಡಿ, ಕೇವಲ ಹೊಗೆ ಬಿಟ್ಟು ಬಂದಿದ್ದಾರೆ. ಈಗ ಮೋದಿಯಿಂದ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಬಾರಿ ಬಿಜೆಪಿಯವರು ಸೋಲುತ್ತಾರೆ. ಈಗ ಬಿಜೆಪಿಯವರು ಭಾವನಾತ್ಮಕವಾಗಿ ಇರುವ ವಿಚಾರವನ್ನು ಹುಡುಕುತ್ತಿದ್ದಾರೆ ಎಂದು ತಿಳಿಸಿದರು.
57 ಸಾವಿರ ಕೋಟಿ ಬಡವರ ಜೇಬಿಗೆ ಹಣ:57 ಸಾವಿರ ಕೋಟಿ ರೂ ಅನ್ನು ಬಡವರ ಜೇಬಿಗೆ ಹಾಕುತ್ತಿದ್ದೇವೆ. ಸಂಸದರು ಹೈವೆ, ಏರ್ಪೋರ್ಟ್ ಹಾಗೂ ಜಲ ಜೀವನ್ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಒಂದು ದಿನ ಸಹ ಸದನದಲ್ಲಿ ಶರಾವತಿ ಸಂತ್ರಸ್ತರ ಪರ ಧ್ವನಿ ಎತ್ತಲಿಲ್ಲ. ಕಾಗೋಡು ತಿಮ್ಮಪ್ಪನವರು ನೀಡಿದ ಹಕ್ಕುಪತ್ರವನ್ನು ಇವರು ರದ್ದು ಮಾಡಿದ್ದರು. ಹಕ್ಕುಪತ್ರ ರದ್ದು ಮಾಡಿದ್ದನ್ನು ತಮ್ಮ ಪ್ರಚಾರದಲ್ಲಿ ಹಾಕಿಸಿಕೊಳ್ಳಬೇಕಿತ್ತು. ಜಿಎಸ್ಟಿ ಹಣ ನಮಗೆ ನೀಡದೇ ಇರುವುದನ್ನು ಹಾಕಿಕೊಳ್ಳಲಿ ಎಂದು ಬಿಜೆಪಿ ಡಿಜಿಟಲ್ ಬ್ಯಾನರ್ ಬಗ್ಗೆ ಕಿಡಿಕಾರಿದರು.
ಗೀತಾ ಅಕ್ಕ ದೆಹಲಿಯಲ್ಲಿ ನಮ್ಮ ಧ್ವನಿಯಾಗಲಿದ್ದಾರೆ: ನಾವು ನುಡಿದಂತೆ ನಡೆದಿದ್ದೇವೆ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಮಗೆ ಕೈ ಬಿಡಲ್ಲ. ಗೀತಾ ಶಿವರಾಜ್ ಕುಮಾರ್ ಅವರು ಈ ಭಾಗದ ಸಮಸ್ಯೆಗಳ ಜನಪ್ರತಿನಿಧಿಯಾಗಿ ಧ್ವನಿಯಾಗಿ ಜನರ ಪರವಾಗಿ ನಿಲ್ಲುತ್ತಾರೆ. ಶಿವಮೊಗ್ಗದ ಧ್ವನಿ ದೆಹಲಿಯಲ್ಲಿ ಕೇಳುವಂತೆ ಆಗುತ್ತದೆ. ಗೀತಾರವರ ಒಂದೇ ಹೆಸರನ್ನು ಕಳುಹಿಸಿದ್ವಿ, ಈ ಬಾರಿಯೂ ಚುನಾವಣೆಯನ್ನು ಹಬ್ಬದಂತೆ ಮಾಡುತ್ತೇವೆ. ನಾವೇ ಅಭ್ಯರ್ಥಿಯಾಗಿ ಕೆಲಸ ಮಾಡುತ್ತೇವೆ. ಬಿಜೆಪಿಯವರ ಸಮೀಕ್ಷೆಯನ್ನು ಮೀರಿ ಗೆಲ್ಲುತ್ತೇವೆ. ಜೆಡಿಎಸ್ ಮೈತ್ರಿಯಿಂದ ಜೆಡಿಎಸ್ ಹಾಗೂ ಹಾಗೂ ಬಿಜೆಪಿಗೂ ಸಹ ಹೊಡೆತ ಬೀಳುತ್ತದೆ ಎಂದು ತಿಳಿಸಿದರು.
ಸಂಸದ ಅನಂತ ಕುಮಾರ ಹೆಗಡೆ ಒಬ್ಬ ಹುಚ್ಚ:ಸಂಸದ ಅನಂತ ಕುಮಾರ ಹೆಗಡೆ ರವರು ಒಬ್ಬ ಹುಚ್ಚ,ಅವರ ಬಗ್ಗೆ ಹೆಚ್ಚು ಪ್ರಶ್ನೆ ಮಾಡಬೇಡಿ. ರಾಘವೇಂದ್ರ ಅವರು ನಿತ್ಯವೂ ಓಡಾಡಿ, ರಿಬ್ಬನ್ ಕಟ್ ಮಾಡಿ ಪೇಪರ್ ಹಾಕಿಸಿಕೊಳ್ಳುವುದು ಮಾತ್ರ ಅಭಿವೃದ್ದಿಯೇ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು. ಬಂಗಾರಪ್ಪ ಸಾಕಷ್ಟು ಯೋಜನೆ ನೀಡಿದರು, ಸೋಲನ್ನು ಅನುಭವಿಸಿದರು. ಈ ಸಲ ಜಿಲ್ಲೆಯ ಜನ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ಬಿಜೆಪಿಗೆ ಅಧಿಕಾರ ನೀಡಿ, ಶರಾವತಿ ಸಂತ್ರಸ್ತರು ಕೋರ್ಟ್ ಗೆ ಅಲೆದಾಡುವಂತಾಗಿದೆ. ಗೀತಾ ಶಿವರಾಜ್ಕುಮಾರ್ರವರು ಶಿವಮೊಗ್ಗ, ಕರಾವಳಿ ಭಾಗದ ಜನರ ಧ್ವನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ವಾರ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ: ಗೀತಾ ಅವರಿಗೆ ಮೂರ್ನಾಲ್ಕು ದಿನ ಕೆಲಸವಿದೆ. ಅವರು ತಮ್ಮ ಕೆಲಸ ಮುಗಿಸಿಕೊಂಡು ಬರುತ್ತಾರೆ. ನಂತರ ಚುನಾವಣೆ ತನಕ ಇಲ್ಲೆ ಇರುತ್ತಾರೆ. ವಿಧಾನಸಭಾ ಕ್ಷೇತ್ರವಾರು ಶಾಸಕರು ಹಾಗೂ ಸೋತ ಅಭ್ಯರ್ಥಿಗಳು ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಶಿವರಾಜ್ ಕುಮಾರ್ ಅವರು ತಮ್ಮ ಸಿನಿಮಾ ಬಿಡುವಿನ ವೇಳೆಯಲ್ಲಿ ಪ್ರಚಾರಕ್ಕೆ ಬರುತ್ತಾರೆ ಎಂದರು.
ಪ್ರಚಾರಕ್ಕೆ ಸಿಎಂ ಹಾಗೂ ಡಿಸಿಎಂ ರವರು, ಪ್ರದೀಪ್ ಈಶ್ವರ್, ನಿಖಿತ್ ಅವರು ಬರುತ್ತಾರೆ. ಸಿನಿ ತಾರೆಯರು ಯಾರು ಬರುತ್ತಾರೆ ಎಂದು ನನಗೆ ಇನ್ನೂ ಗೂತ್ತಿಲ್ಲ. ಗೀತಾ ಶಿವರಾಜ್ ಕುಮಾರ್ ಹೆಚ್ಚಿನ ಮತಗಳನ್ನು ಪಡೆದು ಗೆಲ್ಲುತ್ತಾರೆ ಎಂದರು.
ಹಿಂದೆ ಆಂಜನೇಯನಿಗೆ ಜೈ ಈಗ ಶ್ರೀರಾಮ ಮಂದಿರ:ಹಿಂದೆ ಆಂಜನೇಯ ಜೈ ಅಂದ್ರು, ಈಗ ಶ್ರೀರಾಮ ಮಂದಿರ ಸೇರಿಕೊಂಡಿದೆ. ಬಿಜೆಪಿಯವರಿಗೆ ಪೂರ್ಣ ಬಹುಮತ ಬರಲ್ಲ ಎಂಬ ಭಯ ಪ್ರಾರಂಭವಾಗಿದೆ. ಸಿಲಿಂಡರ್ಗೆ 100 ರೂ ಕಡಿಮೆ ಮಾಡಿದ್ದು ದೊಡ್ಡ ಸಾಧನೆಯೇ? 1300 ಮಾಡಿ 100 ರೂ ಕಡಿಮೆ ಮಾಡಿದ್ದು ಸಾಧನೆಯೇ ಎಂದರು.
ಇದನ್ನೂಓದಿ:ಸ್ವಂತ ಮನೆ ಕಟ್ಟುವವರಿಗೆ “ನಂಬಿಕೆ ನಕ್ಷೆ”, ಹೊಸ ಆಸ್ತಿ ತೆರಿಗೆ ಪದ್ಧತಿ, ಆಸ್ತಿ ತೆರಿಗೆ ಖಾತಾ ವಿತರಣೆ : ಡಿಸಿಎಂ ಡಿ ಕೆ ಶಿವಕುಮಾರ್