ಟಾಪರ್ ಅಂಕಿತಾಗೆ ಕರೆ ಮಾಡಿ ಶುಭಹಾರೈಸಿದ ಸಚಿವ ಮಧು ಬಂಗಾರಪ್ಪ (ETV Bharat) ಶಿವಮೊಗ್ಗ: ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಅಗಿ ಹೊರಹೊಮ್ಮಿದ ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತಾಗೆ ಕರೆ ಮಾಡಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶುಭ ಹಾರೈಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದಿ ಸರ್ಕಾರಿ ಶಾಲೆಗೆ ಗೌರವ ತಂದುಕೊಟ್ಟಿದ್ದೀರಿ, ಇದು ಹೆಮ್ಮೆಯ ವಿಚಾರ. 625ಕ್ಕೆ 625 ಅಂಕ ಪಡೆಯುವುದು ಅಷ್ಟು ಸುಲಭವಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನನ್ನ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಿನ್ನ ಸಾಧನೆ ಸರ್ಕಾರಿ ಶಾಲೆಗಳ ಗೌರವ ಹೆಚ್ಚಿಸಿದೆ ಮತ್ತು ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಣೆ ಮಾಡುವ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ಅವಕಾಶ ಸಿಕ್ಕಾಗ ನಿಮ್ಮನ್ನು ಭೇಟಿ ಮಾಡುತ್ತೇನೆ. ನಿಮ್ಮ ಮುಂದಿನ ಶಿಕ್ಷಣಕ್ಕ ಬೇಕಾದ ಸಹಾಯವನ್ನು ಮಾಡಲಾಗುವುದು ಎಂದು ಹೇಳಿದರು.
ಇದಕ್ಕೆ ಅಂಕಿತಾ ಪ್ರತಿಕ್ರಿಯಿಸಿ, ಸಾರ್ ನೀವು ನನಗೆ ಪೋನ್ ಮಾಡಿದ್ದೆ ನಮಗೆ ತುಂಬ ಸಂತೋಷವಾಗಿದೆ ಎಂದರು. ಈ ವೇಳೆ ಅಂಕಿತ ಪೋಷಕರು ಸಹ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎಸ್‌ಎಸ್‌ಎಲ್‌ಸಿ ಟಾಪರ್ ಅಂಕಿತಾಗೆ ಕರೆ ಮಾಡಿ ಶುಭ ಹಾರೈಸಿದ ಡಿಸಿಎಂ ಡಿ ಕೆ ಶಿವಕುಮಾರ್ - dcm congratulated SSLC topper
ಎಸ್‌ಎಸ್‌ಎಲ್‌ಸಿ ಟಾಪರ್ ಹಿನ್ನೆಲೆ ಏನು?: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ರೈತ ಬಸಪ್ಪ ಎಂಬವರ ಪುತ್ರಿಯಾಗಿರುವ ಅಂಕಿತಾ ಬಸಪ್ಪ ಕೊಣ್ಣೂರ 6ನೇ ತರಗತಿಯಿಂದ 10ನೇ ತರಗತಿವರೆಗೆ ಮೆಳ್ಳಿಗೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ತಂದೆ ಬಸಪ್ಪ ಅವರಿಗೆ ನಾಲ್ಕು ಎಕರೆ ಜಮೀನಿದ್ದು, ಕೃಷಿಯೇ ಕುಟುಂಬದ ಮೂಲ ಆದಾಯ. ತಲೆ ಮೇಲೊಂದು ಸರಿಯಾದ ಮನೆ ಇಲ್ಲ, ಗುಡಿಸಲಲ್ಲೇ ಇವರ ಜೀವನ. 1ರಿಂದ 5ನೇ ತರಗತಿವರೆಗೆ ವಜ್ಜರಮಟ್ಟಿಯಲ್ಲೇ ವ್ಯಾಸಂಗ ಮಾಡಿದ್ದ ಅಂಕಿತಾ ಬಳಿಕ 98 ಅಂಕಗಳೊಂದಿಗೆ ಮುರಾರ್ಜಿ ಶಾಲೆಗೆ ಆಯ್ಕೆಯಾಗಿದ್ದರು. 6ರಿಂದ 10ನೇ ತರಗತಿವರೆಗೆ ಮೆಳ್ಳಿಗೇರಿಯ ಮುರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಬಡತನದ ಮಧ್ಯೆ ವಸತಿ ಶಾಲೆಯಲ್ಲಿದ್ದುಕೊಂಡು ಸತತವಾಗಿ ಅಭ್ಯಾಸ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಇತ್ತೀಚಿಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅಂಕಿತಾ, "ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ತುಂಬಾ ಖುಷಿ ತಂದಿದೆ. ನನ್ನ ಪೋಷಕರು ಮತ್ತು ಗುರುಗಳಿಗೆ ನನಗಿಂತ ಹೆಚ್ಚು ಸಂತಸವಾಗಿದೆ. ಮುಂದೆ ಪಿಯುಸಿ ಸೈನ್ಸ್ ವಿಭಾಗಕ್ಕೆ ಸೇರಿಕೊಳ್ಳುತ್ತೇನೆ. ಬಳಿಕ ಐಎಎಸ್ ಅಧಿಕಾರಿಗಾಗಿ ಸಮಾಜ ಸುಧಾರಣೆ ಮಾಡುವೆ" ಎಂದು ಸಂತಸ ವ್ಯಕ್ತಪಡಿಸಿದ್ದರು.