ಬೆಂಗಳೂರು: ಭಾರತದ ಇ-ತ್ಯಾಜ್ಯವು (ಎಲೆಕ್ಟ್ರಾನಿಕ್ ತ್ಯಾಜ್ಯ) ಉತ್ತಮ ಆರ್ಥಿಕ ಲಾಭದ ಅವಕಾಶವನ್ನು ಹೊಂದಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. ಭಾರತದಲ್ಲಿ ಉತ್ಪಾದನೆಯಾಗುವ ಇ-ತ್ಯಾಜ್ಯದಿಂದ ಹೊರತೆಗೆಯಬಹುದಾದ ಲೋಹ ಮತ್ತು ಇತರ ವಸ್ತುಗಳಿಂದ ಅಂದಾಜು 6 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ವಹಿವಾಟು ನಡೆಯಬಹುದು ಎಂದು ವರದಿ ಹೇಳಿದೆ.
ಚೀನಾ ಮತ್ತು ಯುಎಸ್ ನಂತರ ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಇ-ತ್ಯಾಜ್ಯ ಉತ್ಪಾದಕ ರಾಷ್ಟ್ರವಾಗಿದೆ. ನಗರೀಕರಣ ಮತ್ತು ಹೆಚ್ಚುತ್ತಿರುವ ಆದಾಯದಿಂದಾಗಿ ದೇಶದ ಇ-ತ್ಯಾಜ್ಯವು 2014 ರಲ್ಲಿ ಇದ್ದ 2 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ನಿಂದ 2024 ರಲ್ಲಿ 3.8 ಎಂಎಂಟಿಗೆ ದ್ವಿಗುಣಗೊಂಡಿದೆ ಎಂದು ರೆಡ್ ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ವರದಿ ತಿಳಿಸಿದೆ.
2024 ರ ಹಣಕಾಸು ವರ್ಷದಲ್ಲಿ ಉತ್ಪಾದನೆಯಾದ ಒಟ್ಟು ಇ - ತ್ಯಾಜ್ಯದ ಸುಮಾರು 70 ಪ್ರತಿಶತದಷ್ಟು ಕುಟುಂಬಗಳು ಮತ್ತು ವ್ಯವಹಾರಗಳಿಂದ ಉತ್ಪತ್ತಿಯಾಗಿದೆ. ಜನತೆ ವಸ್ತುಗಳನ್ನು ಬಹಳ ಬೇಗ ಬದಲಾಯಿಸುತ್ತಿರುವುದು ಇ-ತ್ಯಾಜ್ಯ ಉತ್ಪಾದನೆಯಲ್ಲಿ ಒಂದು ಗಮನಾರ್ಹ ಪ್ರವೃತ್ತಿಯಾಗಿದೆ. ಉಪಕರಣಗಳು ಹೆಚ್ಚು ಕಾಂಪ್ಯಾಕ್ಟ್ ಮತ್ತು ಹಗುರವಾಗುತ್ತಿರುವ ಮಧ್ಯೆ ತ್ಯಜಿಸಿದ ವಸ್ತುಗಳ ಪರಿಮಾಣವು ಹೆಚ್ಚುತ್ತಿದೆ. ಹೀಗಾಗಿ ಪರಿಣಾಮಕಾರಿ ಮರುಬಳಕೆ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
"ಮುಂಬರುವ ವರ್ಷಗಳಲ್ಲಿ ಇ - ತ್ಯಾಜ್ಯದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಇ-ತ್ಯಾಜ್ಯದಲ್ಲಿನ ಲೋಹಗಳ ಹೆಚ್ಚುತ್ತಿರುವ ಮೌಲ್ಯವು ಲೋಹಗಳ ಹೊರತೆಗೆಯುವಿಕೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರ ಲೋಹ ಹೊರತೆಗೆಯುವಿಕೆಯಲ್ಲಿ ಮುಂಚೂಣಿಗೆ ಬರಲು ಭಾರತಕ್ಕೆ ಪ್ರಮುಖ ಅವಕಾಶವನ್ನು ಒದಗಿಸುತ್ತದೆ "ಎಂದು ರೆಡ್ ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ನ ಪಾಲುದಾರ ಜಸ್ ಬೀರ್ ಎಸ್ ಜುನೇಜಾ ಹೇಳಿದರು.
ಪ್ರಸ್ತುತ, ಭಾರತದಲ್ಲಿ ಕೇವಲ 16 ಪ್ರತಿಶತದಷ್ಟು ಗ್ರಾಹಕ ಇ-ತ್ಯಾಜ್ಯವನ್ನು ಔಪಚಾರಿಕ ಮರುಬಳಕೆದಾರರು ಸಂಸ್ಕರಿಸುತ್ತಿದ್ದಾರೆ. 2035ರ ಹಣಕಾಸು ವರ್ಷದ ವೇಳೆಗೆ ಔಪಚಾರಿಕ ಮರುಬಳಕೆ ಕ್ಷೇತ್ರದಲ್ಲಿ ಶೇಕಡಾ 17 ರಷ್ಟು ಸಿಎಜಿಆರ್ ದರದಲ್ಲಿ ಬೆಳವಣಿಗೆಯಾಗುವ ಮುನ್ಸೂಚನೆಗಳ ಹೊರತಾಗಿಯೂ, ಭಾರತದಲ್ಲಿ ಶೇ 40ರಷ್ಟು ಮಾತ್ರ ಇ-ತ್ಯಾಜ್ಯದ ಮರುಬಳಕೆ ಸಾಧ್ಯವಾಗುವ ನಿರೀಕ್ಷೆಯಿದೆ.
ಕಡಿಮೆ ಅನುಸರಣೆ ವೆಚ್ಚಗಳು ಮತ್ತು ವ್ಯಾಪಕ ಸಂಗ್ರಹ ಜಾಲಗಳಿಂದ ಪ್ರಯೋಜನ ಪಡೆಯುವ ಅನೌಪಚಾರಿಕ ಸಂಸ್ಕರಣಾ ಘಟಕಗಳಿಂದ ಈ ವಲಯದಲ್ಲಿ ತೀವ್ರ ಸ್ಪರ್ಧೆ ಎದುರಾಗಿದೆ. ಇ-ತ್ಯಾಜ್ಯದ 10-15 ಪ್ರತಿಶತದಷ್ಟು ಮನೆಗಳಲ್ಲಿ ಸಂಗ್ರಹವಾಗುತ್ತದೆ ಮತ್ತು 8-10 ಪ್ರತಿಶತದಷ್ಟು ಇ-ತ್ಯಾಜ್ಯ ಮಣ್ಣಿನಡಿ ಹೂತು ಹೋಗುತ್ತದೆ. ಒಟ್ಟಾರೆ ಮರುಬಳಕೆ ದಕ್ಷತೆಯು ಕಡಿಮೆಯಾಗುವುದಕ್ಕೆ ಇದೂ ಒಂದು ಕಾರಣವಾಗಿದೆ.
ಇದನ್ನೂ ಓದಿ : ಏಷ್ಯಾ-ಪೆಸಿಫಿಕ್‌ನ 100 ಬೆಸ್ಟ್ ಸಿಟಿಗಳ ಪಟ್ಟಿ: ಬೆಂಗಳೂರು, ಮೈಸೂರಿನ ಸ್ಥಾನ ಬಹಿರಂಗ - ASIA PACIFIC 100 BEST CITIES