ಬೆಂಗಳೂರು: ಸಚಿವ ಎಂ.ಬಿ.ಪಾಟೀಲ್ ರೆಟ್ರೊ ಫಿಟ್ಮೆಂಟ್ ಕಿಟ್ ಇದ್ದ ಹೈಬ್ರೀಡ್ ಕಾರಿನಲ್ಲಿ ಗುರುವಾರ ಸಂಚರಿಸಿದರು. ಅಹೋಡ್ಸ್ ನಿಸಾನ್ ಕಂಪನಿಯ ಏಳು ವರ್ಷ ಹಳೆಯ ಹೈಬ್ರೀಡ್ (ಹೈಡ್ರೋಜನ್-ಡೀಸೆಲ್) ಕಾರಿನಲ್ಲಿ ಐಟಿಸಿ ಗಾರ್ಡೆನೀಯ ಹೋಟೆಲ್ನಿಂದ ಕಬ್ಬನ್ ಪಾರ್ಕಿನವರೆಗೂ ಸಚಿವರು ಪ್ರಯಾಣಿಸಿದರು.
ಪರಿಸರಸ್ನೇಹಿ ಮತ್ತು ಸುಸ್ಥಿರ ಸಂಚಾರ ವ್ಯವಸ್ಥೆಯ ಮಾದರಿಗಳನ್ನು ಉತ್ತೇಜಿಸುವ ಆಶಯದೊಂದಿಗೆ ಉಬರ್ ಕಂಪನಿಯು ಏರ್ಪಡಿಸಿದ್ದ ರಾಷ್ಟ್ರ ಮಟ್ಟದ 'ಉಬರ್ ಸಸ್ಟೈನೋವೇಟ್' ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಗುರುಗ್ರಾಮದ 'ಅಹೋಡ್ಸ್' (ಅಡ್ವಾನ್ಸ್ಡ್ ಹೈಡ್ರೋಜನ್ ಆನ್ ಡಿಮ್ಯಾಂಡ್ ಸಪ್ಲೈ) ಕಂಪನಿಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಗುರುವಾರ ಇಲ್ಲಿ ಒಂದು ಕೋಟಿ ರೂ. ನಗದು ಬಹುಮಾನವನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಹಳೆಯ ವಾಹನಗಳನ್ನು ಹೈಡ್ರೋಜನ್ ಮತ್ತು ಡೀಸೆಲ್ ಎರಡರ ಬಲದ ಮೇಲೂ ಓಡಿಸುವುದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ರೆಟ್ರೋ-ಫಿಟ್ಮೆಂಟ್ ಕಿಟ್ ತಯಾರಿಸುತ್ತಿರುವ ಅಹೋಡ್ಸ್ ಕಂಪನಿಯ ಸಾಧನೆ ಅನುಕರಣಯೋಗ್ಯವಾಗಿದೆ. ಇದು ನಮ್ಮ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸುವಲ್ಲಿ ಮೌಲಿಕ ನೆರವು ನೀಡಲಿದೆ" ಎಂದರು.
"ಒಟ್ಟು 140 ನವೋದ್ಯಮಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪುಣೆಯ ಗೋವಿದ್ಯುತ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಗುರುಗ್ರಾಮದ ಮತ್ತೊಂದು ನವೋದ್ಯಮವಾದ ಮೆಟ್ಜ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು. ಪ್ರಶಸ್ತಿಗೆ ಪಾತ್ರವಾಗಿರುವ ಮೂರೂ ಕಂಪನಿಗಳಿಗೆ ಉಬರ್ ಕಂಪನಿಯು ತಾಂತ್ರಿಕ ನೆರವು ನೀಡಲಿದೆ" ಎಂದು ತಿಳಿಸಿದರು.
"ಕರ್ನಾಟಕವು ಸದ್ಯದಲ್ಲೇ ಶುದ್ಧ ಇಂಧನ ನೀತಿಯನ್ನು ಜಾರಿಗೆ ತರಲಿದೆ. ಈ ನೀತಿಯು ಈಗಾಗಲೇ ಸಿದ್ಧವಾಗಿದ್ದು, ಮುಖ್ಯವಾಗಿ ಮಾಲಿನ್ಯ ಉಂಟು ಮಾಡದಂತಹ ಸುಗಮ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡಲಿದೆ. ಸುಸ್ಥಿರತೆ ಎನ್ನುವುದು ಈಗ ಜೀವನ ವಿಧಾನವೇ ಆಗಿದೆ. ಸುಸ್ಥಿರ ಸಂಚಾರ ವಲಯಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಉತ್ತೇಜನ ಮತ್ತು ಸೌಲಭ್ಯಗಳನ್ನು ನೀಡಲಿದೆ. ಇದನ್ನು ಈ ವಲಯದ ನವೋದ್ಯಮಗಳು ಸದ್ಬಳಕೆ ಮಾಡಿಕೊಳ್ಳಬೇಕು" ಎಂದರು. ಇದಕ್ಕೆ ಸ್ಪಂದಿಸಿದ ಅಹೋಡ್ಸ್ ಕಂಪನಿಯು ರಾಜ್ಯದಲ್ಲಿ ತನ್ನ ರೆಟ್ರೋಫಿಟ್ ಕಿಟ್ ಉತ್ಪಾದನಾ ಘಟಕ ಆರಂಭಿಸುವ ಆಸಕ್ತಿಯನ್ನು ವ್ಯಕ್ತಪಡಿಸಿತು.
"ಹೈಡ್ರೋಜನ್ ಮತ್ತು ಡೀಸೆಲ್ ಎರಡರಲ್ಲೂ ಓಡುವ ಈ ಕಾರಿನ ಪ್ರಯಾಣ ಮುದ ನೀಡುವಂತಿತ್ತು. ಈ ಕಾರು ಎರಡೂವರೆ ವರ್ಷದಿಂದ ಸಂಚರಿಸುತ್ತಿದೆ ಎಂದು ತಿಳಿದು ಸಂತಸವಾಯಿತು. ಇದರಿಂದ ಇಂಧನ ದಕ್ಷತೆ ಜತೆಗೆ ಪರಿಸರ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ ಎನ್ನುವುದನ್ನು ತಿಳಿದು ಮತ್ತಷ್ಟು ಸಂತಸವಾಯಿತು" ಎಂದರು.
ಇದನ್ನೂ ಓದಿ:ಆಟೋಮ್ಯಾಟಿಕ್ V/s ಮ್ಯಾನುವಲ್ ಕಾರು: ಭಾರತೀಯರು ಯಾವುದನ್ನು ಹೆಚ್ಚು ಖರೀದಿಸುತ್ತಾರೆ ಮತ್ತು ಏಕೆ?