ಬೆಂಗಳೂರು: ಕಾಂಗ್ರೆಸ್ ಶಾಸಕರು ಆಮಿಷಕ್ಕೆ ಬಲಿಯಾಗಲ್ಲ. ಇಲ್ಲಿ ಯಾರೂ ಏಕನಾಥ್ ಶಿಂಧೆಗಳಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸದಾಶಿವನಗರದ ಬಳಿ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ನಾವು 136 ಸೀಟು ಪಡೆದು ಸರ್ಕಾರ ರಚಿಸಿದ್ದೇವೆ. ಸರ್ಕಾರ ಕೆಡವಬೇಕಾದರೆ ಅವರಿಗೆ 80 ಸೀಟುಗಳು ಬೇಕಾಗುತ್ತದೆ. ಆಪರೇಷನ್ ಕಮಲ ಮಾಡಿದ್ರೂ 60 ಮಂದಿ ಬೇಕು. ಬಿಜೆಪಿಯ ಎಂಟತ್ತು ಶಾಸಕರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಆಪರೇಷನ್ ಕಮಲ ವರ್ಕೌಟ್ ಆಗಲ್ಲ. ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕ ಇವರಿಗೆ ಬಲಿಯಾಗಲ್ಲ. ಆಪರೇಷನ್ ಕಮಲ ಉದ್ಭವಿಸಲ್ಲ. 100, 500 ಕೋಟಿ ಕೊಟ್ರೂ ಏನೂ ಆಗುವುದಿಲ್ಲ ಎಂದು ಹೇಳಿದರು.
ಜಿಂದಾಲ್ಗೆ ಭೂಮಿ ನೀಡಿದ ವಿಚಾರವಾಗಿ ಮಾತನಾಡಿ, ಭೂಮಿ ಕೊಟ್ಟವರು ಯಡಿಯೂರಪ್ಪ. ಮಾರುಕಟ್ಟೆ ಬೆಲೆಗೆ ಭೂಮಿ ನೀಡಲಾಗಿದೆ. ಚಾಣಕ್ಯ ವಿವಿಯಂತೆ ನಾವು ಮಾಡಿಲ್ಲ. ನಮ್ಮ ಪಾಲಿಸಿಯಂತೆಯೇ ಮಾಡಿದ್ದೇವೆ. ಇಂಡಸ್ಟ್ರಿ ಮಾಡಬೇಕಾದರೆ ಕೋಟಿ ರೂ. ಇತ್ತು ಅನ್ನಿ, ನಾವು ಇಂಡಸ್ಟ್ರಿಗೆ ಜಾಗ ಕೊಡ್ತೇವೆ. ಅವತ್ತಿನ ಮಾರ್ಕೆಟ್ ಬೆಲೆಯಂತೆ ಕೊಟ್ಟಿರುತ್ತೇವೆ. ಅದು ಯಾವಾಗಲೇ ಮಾಡಲಿ ರನ್ನಿಂಗ್ ಕಂಡೀಷನ್ ಇರುತ್ತೆ. ಹಾಗಾಗಿ ಜಿಂದಾಲ್ಗೂ ಬೇರೆಯದಕ್ಕೂ ಸಂಬಂಧವಿಲ್ಲ. ಹೈಕೋರ್ಟ್ ನಿರ್ದೇಶನ ಕೊಟ್ಟಿದೆ. 2020ರ ಕ್ಯಾಬಿನೆಟ್ ತೀರ್ಮಾನ ಪಾಲನೆಗೆ ಹೇಳಿದೆ. ಆಗೇನು ನಾವು ಇದ್ವಾ?. ಎಲ್ಲಿಯೂ ನಾವು ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದರು.