ಕರ್ನಾಟಕ

karnataka

ETV Bharat / state

ರೇಷನ್ ಕಾರ್ಡ್ ರದ್ದು: 'ಪ್ರಧಾನಿ ಮನೆ ಮುಂದೆ ಧರಣಿ ನಡೆಸುವ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ?': ಸಚಿವ ಎಂ.ಬಿ.ಪಾಟೀಲ್

ಕೇಂದ್ರ ಸರ್ಕಾರದಿಂದ ಪಡಿತರ ಚೀಟಿ ರದ್ಧತಿ ಕುರಿತಂತೆ ಪ್ರಧಾನಿ ಮನೆ ಮುಂದೆ ಧರಣಿ ನಡೆಸುವ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

m b patil
ಎಂ.ಬಿ.ಪಾಟೀಲ್ (ETV Bharat)

By ETV Bharat Karnataka Team

Published : 10 hours ago

ಬೆಂಗಳೂರು:''ರಾಜ್ಯದಲ್ಲಿ ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸುತ್ತಿರುವುದನ್ನು ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ. ಕೇಂದ್ರದ ಮೋದಿ ಸರ್ಕಾರವೇ ಡಿಜಿಟಲೀಕರಣದ ಹೆಸರಿನಲ್ಲಿ 5.80 ಕೋಟಿ ರೇಷನ್ ಕಾರ್ಡ್ ರದ್ದುಪಡಿಸಿದೆ. ಬಿಜೆಪಿ ನಾಯಕರೇಕೆ ಈಗ ಗಪ್-ಚುಪ್ ಆಗಿದ್ದಾರೆ'' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಎಕ್ಸ್ ಪೋಸ್ಟ್​​ನಲ್ಲಿ ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಇಬ್ಭಾಗವಾಗಿದೆ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ್ ಮತ್ತು ಅವರ ತಂಡ ಪ್ರಯತ್ನಿಸುತ್ತಿದೆ. ಈಗ ವಿನಾಃಕಾರಣ ಪಡಿತರ ಚೀಟಿ ಹೆಸರಿನಲ್ಲಿ ಗದ್ದಲ ಸೃಷ್ಟಿಸುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿಯು ನಿಜವಾದ ಬಡವರಿಗೆ ಸಿಗಬೇಕು. ಹೀಗಾಗಿಯೇ ರಾಜ್ಯ ಸರ್ಕಾರವು ಶ್ರೀಮಂತರು, ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ಅಧಿಕಾರಿಗಳ ಬಳಿ‌ ಇರುವ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸುತ್ತಿದೆ. ರಾಜ್ಯ ಬಿಜೆಪಿ ನಾಯಕರು ಇದರ ವಿರುದ್ಧ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಎಂ.ಬಿ.ಪಾಟೀಲ್ X ಪೋಸ್ಟ್​ (X Post)

ಕೇಂದ್ರದ ವಿರುದ್ಧ ಹೋರಾಟ ಮಾಡುವಿರಾ?: ಬಿ.ವೈ.ವಿಜಯೇಂದ್ರ, ಆರ್​.ಅಶೋಕ್​, ಪ್ರಲ್ದಾದ್​ ಜೋಶಿ, ಶೋಭಾ ಕರಂಂದ್ಲಾಜೆ ಅವರನ್ನು ಟ್ಯಾಗ್​ ಮಾಡಿರುವ ಎಂ.ಬಿ.ಪಾಟೀಲ್​, ಕೇಂದ್ರದ ವಿರುದ್ಧ ಹೋರಾಟ ಮಾಡುವಿರಾ? ಎಂದು ಪ್ರಶ್ನಿಸಿದ್ದಾರೆ.

''ರಾಜ್ಯ ಬಿಜೆಪಿಯ ಅಧಿಕೃತ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಲು ಆತುರದಲ್ಲಿರುವ ಬಿಜೆಪಿ ಬಂಡಾಯ ಗುಂಪಿನ ಅಧ್ಯಕ್ಷರಾದ ಬಸನಗೌಡ ಪಾಟೀಲ್​​ ಯತ್ನಾಳ್​ ಅವರೇ ಇದಕ್ಕೆ ಏನಂತೀರಾ? ನಿಮ್ಮ ನಿಮ್ಮಲ್ಲೇ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಜೆಪಿ ನಾಯಕರೇ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸ 7-LKM ಮುಂದೆ ಧರಣಿ ಮಾಡಿ, ಬಿಪಿಎಲ್ ರದ್ದಾದ ಅರ್ಹರಿಗೆ ನ್ಯಾಯ ಕೊಡಿಸುವಿರಾ?'' ಎಂದು ಕುಟುಕಿದ್ದಾರೆ.

ಇದನ್ನೂ ಓದಿ:ಸದನ ಆರಂಭವಾಗುವ ಮುನ್ನವೇ ರಾಜ್ಯ ಸರ್ಕಾರ ಜನರಿಗೆ ರೇಷನ್‌ ಕಾರ್ಡ್‌ ವಾಪಸ್‌ ನೀಡಬೇಕು : ಆರ್‌ ಅಶೋಕ್

ಸಂಸದ ಬೊಮ್ಮಾಯಿ ಕಿಡಿ:''ಅನ್ನಭಾಗ್ಯ ಎಂದು ಹೇಳಿ ಜನರ ಅನ್ನ ಕಸಿದುಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಜನರ ಜೀವನ ನರಕ ಮಾಡಲು ಹೊರಟಿದ್ದಾರೆ. ಇದು ಜನ ವಿರೋಧಿ ಸರ್ಕಾರ'' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಸ್ಲಂನಲ್ಲಿ ವಾಸಿಸಲು ಆಗದ ಜಾಗದಲ್ಲಿಯೂ ಜನರು ವಾಸವಾಗಿದ್ದಾರೆ. ಅಂತವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಅವರು ತೆರಿಗೆ ಕಟ್ಟುವವರು ಅಂತ ಹೇಳುತ್ತಾರೆ. ಅವರೆಲ್ಲ ತೆರಿಗೆ ಕಟ್ಟುತ್ತಾರಾ'' ಎಂದು ಪ್ರಶ್ನಿಸಿದರು.

''ಬಿಪಿಎಲ್ ಕಾರ್ಡ್ ರದ್ದಾದರೆ ಕೇವಲ ಅಕ್ಕಿ ಮಾತ್ರ ರದ್ದಾಗುವುದಿಲ್ಲ. ಔಷಧಿ, ಆಸ್ಪತ್ರೆ ಸೌಲಭ್ಯ ಎಲ್ಲವೂ ಸ್ಥಗಿತವಾಗುತ್ತವೆ‌. ಜನರ ಕಷ್ಟ ಅವರಿಗೆ ಅರ್ಥ ಆಗುತ್ತಿಲ್ಲ. ಮುಡಾ ಅಂತ ಹೇಳಿ ಸೈಟ್ ವಾಪಸ್ ನೀಡಿದ್ದರು. ಈಗ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೆ ಅರ್ಜಿ ಹಾಕಬೇಕಂತೆ, ಇದೇನು ಮುಖ್ಯಮಂತ್ರಿಗಳೆ?. ಇದು ಅತ್ಯಂತ ಜನ ವಿರೋಧಿ ಸರ್ಕಾರ. ಇದು ಯುಟರ್ನ್ ಸರ್ಕಾರ'' ಎಂದು ವಾಗ್ದಾಳಿ ನಡೆಸಿದರು.

''ಕಾರ್ಡ್ ರದ್ದು ಮಾಡಿರುವುದನ್ನು ವಿರೋಧಿಸಿದ ಮೇಲೆ ಈಗ ವಾಪಸ್ ತೆಗೆದುಕೊಳ್ಳುವ ಕೆಲಸ ಮಾಡುತ್ತಾರೆ. ರೇಷನ್ ಕಾರ್ಡ್ ರದ್ದಾದವರು ಅರ್ಜಿ ಹಾಕಿದರೆ ತಕ್ಷಣ ವಾಪಸ್ ಕೊಡಲಾಗುವುದು ಎಂದು ಹೇಳುತ್ತಾರೆ. ಅರ್ಜಿ ಹಾಕಿದ ಮೇಲೆ ಕಾರ್ಡ್ ಬರುವುದು ಯಾವಗ? ಅಲ್ಲಿಯ. ತನಕ ಕಾರ್ಡ್ ರದ್ದಾಗಿರುವ ಬಡವರು ಏನು ತಿನ್ನಬೇಕು'' ಎಂದು ಪ್ರಶ್ನೆ ಮಾಡಿದರು.

''ಈ ಸರ್ಕಾರ ಹೀಗೆ ಮಾಡಿದರೆ ಹೆಚ್ಚು ದಿನ ಇರುವುದಿಲ್ಲ. ಕೇಂದ್ರ ಸರ್ಕಾರದ ಮಾನದಂಡದ‌ ಪ್ರಕಾರ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಅನ್ನ ಕೊಡುತ್ತಿದೆ. ಬೇರೆ ರಾಜ್ಯದಲ್ಲಿ ಎಲ್ಲಿ ರೇಷನ್ ಕಾರ್ಡ್ ರದ್ದಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಕ್ಕಿ ಕೊಟ್ಟರು. ರಾಜ್ಯ ಸರ್ಕಾರ 10 ಕೆಜಿ ಕೊಡುತ್ತೇವೆ ಎಂದು ಹೇಳಿದರು. ಅದರ ಬದಲು ಹಣ ಕೊಡುತ್ತೇವೆ ಎಂದರು, ಇವರಿಗೆ ಅಕ್ಕಿಗೆ ಹಣ ಕೊಡಲು ದುಡ್ಡಿಲ್ಲ. ಅದನ್ನು ಮರೆಮಾಚಲು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ಇವರು ಪಾಪದ ಕೃತ್ಯ ಮಾಡಿದ್ದಾರೆ'' ಎಂದು ಹೇಳಿದರು.

ಇದನ್ನೂ ಓದಿ:ಬಿಪಿಎಲ್​​ ಕಾರ್ಡ್​ಗಳ ಪರಿಷ್ಕರಣೆ ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ

ABOUT THE AUTHOR

...view details