ಬೆಂಗಳೂರು: ರಾಜ್ಯದ ನಾನಾ ಕೈಗಾರಿಕಾ ಪ್ರದೇಶಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿ, ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದರು.
ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆ, ಬೆಂಗಳೂರು ಜಲ ಮಂಡಳಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ. ಇದಲ್ಲದೇ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನಿತ್ಯ 45 ಎಂಎಲ್.ಡಿಯಷ್ಟು ಕುಡಿಯುವ ನೀರು ಅಗತ್ಯವಿದೆ.
ಇದನ್ನು ಹಿಡಕಲ್ ಜಲಾಶಯದಿಂದ ಪೂರೈಸಬಹುದು. ಹಾಗೆಯೇ, ವಿಜಯಪುರ ಕೈಗಾರಿಕಾ ಪ್ರದೇಶಕ್ಕೆ ಕೂಡ ಕೃಷ್ಣಾ ಜಲಾಶಯದಿಂದ ನಿತ್ಯವೂ ಇಷ್ಟೇ ಪ್ರಮಾಣದ ಕುಡಿಯುವ ನೀರು ಪೂರೈಸಬೇಕಾಗಿದೆ. ಕಲಬುರಗಿ ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ಮತ್ತು ಭೀಮಾ ನದಿಗಳಿಂದ ದಿನವೂ 7 ಎಂಎಲ್ ಡಿ, ಬಳ್ಳಾರಿ ಕೈಗಾರಿಕಾ ಪ್ರದೇಶಕ್ಕೆ ತುಂಗಭದ್ರಾ ಅಣೆಕಟ್ಟೆಯಿಂದ 13 ಎಂಎಲ್ ಡಿ, ರಾಯಚೂರು ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ನದಿಯಿಂದ 13 ಎಂಎಲ್ ಡಿ ಕುಡಿಯುವ ನೀರು ಅಗತ್ಯವಿದೆ. ಒಟ್ಟಾರೆ ನಿತ್ಯ 290 ಎಂಎಲ್ ಡಿ ನೀರು ಈ ಜಿಲ್ಲೆಗಳಿಗೆ ಬೇಕಾಗಿದೆ. ಇದನ್ನು ಬಗೆಹರಿಸದೇ ಹಾಗೆಯೇ ಬಿಟ್ಟರೆ ರಾಜ್ಯದ ಕೈಗಾರಿಕಾ ಬೆಳವಣಿಗೆಯೇ ಹಿನ್ನಡೆ ಕಾಣಲಿದೆ ಎಂದು ಆತಂಕ ವ್ಯಕ್ತಪಡಿಸಿದರು.