ವಿಜಯಪುರ :ಸುಳ್ಳು ಹೇಳುವವರನ್ನು ನಂಬದೇ ಸತ್ಯದ ಪರ ಇರುವವರಿಗೆ ಮತಹಾಕಿ ಗೆಲ್ಲಿಸಿ ಎಂದು ಸಚಿವ ಎಂ. ಬಿ. ಪಾಟೀಲ ಮತದಾರರಿಗೆ ಕರೆ ನೀಡಿದರು. ವಿಜಯಪುರ ನಗರದಲ್ಲಿ ಬುಧವಾರ ನಡೆದ ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೊ. ರಾಜು ಆಲಗೂರ ಎರಡು ಬಾರಿ ಶಾಸಕರಾಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಟ್ಟಾ ಕಾಂಗ್ರೆಸ್ಸಿಗರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ಸಲ ಜೆಡಿಎಸ್ ಗೆ ಟಿಕೆಟ್ ನೀಡಿದ ಹಿನ್ನೆಲೆ ಆಲಗೂರ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿರಲಿಲ್ಲ. ಈ ಬಾರಿ ಒಮ್ಮತದ ಅಭ್ಯರ್ಥಿಯಾಗಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಶಾಸಕರಾಗಿ ವಿಧಾನಸಭೆಯಲ್ಲಿ ಮಾಡಿದಂತೆ ಲೋಕಸಭೆಯಲ್ಲಿ ವಿಜಯಪುರದ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಅವರು ಯಾವುದೇ ಕೆಲಸ ಮಾಡಿಲ್ಲ. ರೈಲ್ವೆ ಮೇಲ್ಸೇತುವೆ ಕುರಿತು ಅವರು ಪ್ರಸ್ತಾಪಿಸುತ್ತಾರೆ. ಆದರೆ, ಈ ರೈಲ್ವೆ ಮೇಲ್ಸೇತುವೆಯಲ್ಲಿ ರಾಜ್ಯ ಸರಕಾರವೂ ಶೇ. 50 ರಷ್ಟು ಅನುದಾನ ನೀಡುತ್ತದೆ. 2014 ರಲ್ಲಿ ಮೋದಿ ದೊಡ್ಡ ಬದಲಾವಣೆ ತರುವುದಾಗಿ ಪ್ರಚಾರ ಮಾಡಿದರು. ಆದರೆ, ಕಪ್ಪು ಹಣ ವಾಪಸ್ ತರುವುದು ಸೇರಿದಂತೆ ಯಾರ ಅಕೌಂಟಿಗೂ 15 ಲಕ್ಷ ರೂ. ಹಾಕಲಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ನೋಟ್ ಬ್ಯಾನ್ ನಿಂದ ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತೆ ಮಾಡಿದರು.
ರೈತರ ಆದಾಯ ದ್ವಿಗುಣ ಮಾಡಲಿಲ್ಲ. ನಾವು ನೀರಾವರಿ ಮೂಲಕ ರೈತರ ಆದಾಯ ಹೆಚ್ಚಿಸಿದ್ದೇವೆ. ಭೂಮಿಯ ಬೆಲೆ ಈಗ 10 ಪಟ್ಟು ಹೆಚ್ಚಾಗಿದೆ. ತೈಲ ಮತ್ತು ಗ್ಯಾಸ್ ಬೆಲೆ ಏರಿಕೆ ಇವರು ನೀಡಿರುವ ಅಚ್ಚೇ ದಿನ್ ಆಗಿವೆ. ತಿನ್ನುವ ಆಹಾರ ಸೇರಿ ಎಲ್ಲ ವಸ್ತುಗಳ ಮೇಲೆ ಜಿಎಸ್ಟಿ ಹಾಕಿದ್ದಾರೆ. ಎಲೆಕ್ಟ್ರೋಲ್ ಬಾಂಡ್ ನಲ್ಲಿ ಇವರ ಎಲ್ಲ ಕೆಲಸಗಳು ಬಹಿರಂಗವಾಗಿವೆ. ಕೇಂದ್ರದಲ್ಲಿ ಜವಾಹರಾಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ, ಮನಮೋಹನಸಿಂಗ್ ಸೇರಿದಂತೆ ಕಾಂಗ್ರೆಸ್ ಪ್ರಧಾನಿಗಳ ಅವಧಿಯಲ್ಲಿ ಸ್ಥಾಪಿಸಲಾದ ಸಂಸ್ಥೆಗಳನ್ನು ಈ ಬಿಜೆಪಿ ಸರಕಾರ ಖಾಸಗೀಕರಣ ಮಾಡುತ್ತಿದೆ. ಕಳಂಕಿತರು ಬಿಜೆಪಿಗೆ ಸೇರ್ಪಡೆಯಾದರೆ ಕಳಂಕ ರಹಿತರಾಗುತ್ತಿದ್ದಾರೆ. ಸುಳ್ಳು ಹೇಳುವವರನ್ನು ನಂಬದೇ ಸತ್ಯವಂತರ ಪರ ಮತ ಹಾಕಿ ಎಂದು ಹೇಳಿದರು.