ಬೆಳಗಾವಿ: ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಬಿಜೆಪಿ ನಾಯಕರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು. ಸುವರ್ಣಸೌಧದಲ್ಲಿಂದು ಮಾತನಾಡಿದ ಅವರು, ಮಾತುಕತೆಗೆ ಮುಖಂಡರುಗಳನ್ನು ಕರೆತರುವಂತೆ ನನಗೆ ಸಿಎಂ ಸೂಚಿಸಿದ್ದರು. ಸಿ.ಸಿ.ಪಾಟೀಲ್ ಸೇರಿದಂತೆ ಹಲವು ನಾಯಕರಿಗೆ ನಾನೇ ಖುದ್ದು ಕರೆ ಮಾಡಿದರೂ ಯಾರೂ ಸಭೆಗೆ ಬರಲಿಲ್ಲ. ಮೀಸಲಾತಿ ಹೋರಾಟ ರಾಜಕೀಯ ಆಗುತ್ತಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಅಂತ ಬರಬಾರದು ಎಂದರು.
ಮೀಸಲಾತಿ ವಿಚಾರವಾಗಿ ಬಿಜೆಪಿಯವರಿಗೆ ಈ ಪ್ರೀತಿ ಮೊದಲೇ ಯಾಕಿರಲಿಲ್ಲ? ಅವರ ಸರ್ಕಾರ ಇದ್ದಾಗ 2A ಮೀಸಲಾತಿಯನ್ನು ಯಾಕೆ ಕೊಡಲಿಲ್ಲ? ಆಗ ಮೀಸಲಾತಿ ಕೊಡದೇ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು ಎಂದು ಸಚಿವೆ ಹೆಬ್ಬಾಳ್ಕರ್ ಕಿಡಿಕಾರಿದರು.
ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಮಾತುಕತೆಗೆ ಮುಖ್ಯಮಂತ್ರಿಗಳು ಸಮಯ ಕೊಟ್ಟಿದ್ದರು. ನಾನೇ ಫೋನ್ ಮಾಡಿದ್ದಲ್ಲದೇ ಸ್ವತಃ ಹೋಗಿ ಕರೆದು ಬಂದಿದ್ದೆ. ಸಮಾಜದ 10 ಜನ ಮುಖಂಡರನ್ನು ಕರೆದುಕೊಂಡು ಬರಲು ಸಿಎಂ ಸೂಚಿಸಿದ್ದರು. ಈ ಸಂಬಂಧ ಸಿ.ಸಿ.ಪಾಟೀಲ್ ಅವರಿಗೆ ನಾನೇ ಫೋನ್ ಮಾಡಿ ಕರೆದೆ. ಅವರು ಯಾರೂ ಬರಲಿಲ್ಲ ಎಂದು ಹೇಳಿದರು.