ಬಳ್ಳಾರಿ: ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ, ಕೆಕೆಆರ್ಡಿಬಿಯಿಂದ 240 ಕೋಟಿ ರೂಪಾಯಿ ಅನುದಾನ ನೀಡಿದೆ. ಬೆಟ್ಟದ ಸುತ್ತಮುತ್ತ ಯಾತ್ರಿ ನಿವಾಸಗಳು, ದೇವಸ್ಥಾನದ ಎರಡು ಕಡೆ ಮೆಟ್ಟಿಲು, ಕುಡಿಯುವ ನೀರಿನ ವ್ಯವಸ್ಥೆ, ಶಾಪಿಂಗ್ ಮಾಲ್, ರಸ್ತೆ, ಇನ್ನಿತರ ಸೌಲಭ್ಯಗಳನ್ನು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ 1,350 ಕೋಟಿ ರೂಪಾಯಿ ಅನುದಾನಕ್ಕೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ರೂ ಅನುದಾನ ನೀಡಿದ್ದಾರೆ. 150 ಜನರಿಗೆ ಒಂದು ಯಾತ್ರಿ ನಿವಾಸದಂತೆ ನಾಲ್ಕು ಯಾತ್ರಿ ನಿವಾಸಗಳ ನಿರ್ಮಾಣಕ್ಕೆ 32 ಕೋಟಿ ರೂ ಆಗುತ್ತದೆ. ಇವೆಲ್ಲ ಒಂದು ವರ್ಷದಲ್ಲಿ ಉದ್ಘಾಟನೆ ಆಗಲಿದೆ. ಈವರೆಗೆ 22 ಕೋಟಿ ರೂ ಶಾಪಿಂಗ್ ಕಾಂಪ್ಲೆಕ್ಸ್‌ಗೆ, ಕೆಕೆಆರ್ಡಿಬಿಯಿಂದ 40 ಕೋಟಿ ರೂ ಅನುದಾನ ಬಂದಿದೆ ಎಂದು ತಿಳಿಸಿದರು.
ರೈತರಿಂದ 70 ಎಕರೆ ಜಮೀನು ಖರೀದಿಗೆ ನೋಟಿಫಿಕೇಷನ್ ಆಗಿದೆ. 29 ಕೋಟಿ ರೂ ಬಿಡುಗಡೆ ಆಗಿದೆ. ಬಾಲ ಹನುಮನ ಮಂದಿರ ನಿರ್ಮಾಣ ಆಗುತ್ತದೆ. 5 ಸಾವಿರ ಜನರು ಕುಳಿತುಕೊಳ್ಳುವ ಸೆಂಟರ್, 5 ಸಾವಿರ ಭಕ್ತರಿಗೆ ಎರಡು ಪ್ರಸಾದ ವ್ಯವಸ್ಥೆ ಹಾಲ್ಗಳು, ಎರಡು ಕಡೆ ಮೆಟ್ಟಿಲುಗಳು 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತದೆ. ತಿರುಪತಿ ದೇವಸ್ಥಾನದ ಮೆಟ್ಟಿಲಿನಂತೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
ಹಂಪಿ ಸ್ಮಾರಕದ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ: ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ 100 ಕೋಟಿ ರೂ ಅನುದಾನ ಬಂದಿದೆ. ಮೂಲ ವಿಗ್ರಹಕ್ಕೆ ತೊಂದರೆ ಆಗದಂತೆ ತಿರುಪತಿ ಮಾದರಿಯಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ದೇವಸ್ಥಾನದ ಮೇಲುಗಡೆ 80 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವಾಗುತ್ತದೆ ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ: ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿರಲಿಲ್ಲ; ಶಾಸಕ ಜನಾರ್ದನರೆಡ್ಡಿ