ಬೆಳಗಾವಿ: "ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ತಮ್ಮ ಪುತ್ರ ಮೃಣಾಲ್ ಅವರಿಗೆ ಟಿಕೆಟ್ ನೀಡಬೇಕೆಂದು ನಾನು ಒತ್ತಾಯ ಮಾಡಿಲ್ಲ. ಆದರೆ, ಕ್ಷೇತ್ರದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಗೆಲುವಿನ ಸಾಮರ್ಥ್ಯದ ಮಾನದಂಡದ ಮೇಲೆ ಅಭ್ಯರ್ಥಿ ಆಯ್ಕೆಯಾಗಲಿದೆ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ತಮ್ಮ ಪುತ್ರ ಮೃಣಾಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದು ಅಥವಾ ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಈ ಹಿಂದೆ ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿಯವರು ಎಂಎಲ್ಸಿ ಆಗುವ ವೇಳೆಯಲ್ಲೂ ಜಿಲ್ಲೆಯ ಮುಖಂಡರು ಹಾಗೂ ಜನರ ಒತ್ತಾಸೆ ಇತ್ತು" ಎಂದರು.
"ಈಗಲೂ ಜಿಲ್ಲೆಯ ಜನರು, ಎಲ್ಲಾ ಸಮುದಾಯಗಳ ಮುಖಂಡರು ತಮ್ಮ ಪುತ್ರ ಸ್ಪರ್ಧಿಸಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ತಲೆಬಾಗುತ್ತೇವೆ. ಚುನಾವಣೆಯಲ್ಲಿ ತಮ್ಮ ಪುತ್ರ ಮೃಣಾಲ್ ಅವರಿಗೆ ಪಕ್ಷ ಟಿಕೆಟ್ ನೀಡಿದರೂ ಅಥವಾ ಬೇರೆ ಯಾರಿಗೇ ಟಿಕೆಟ್ ನೀಡಿದರೂ ಬಹಳ ಪ್ರಾಮಾಣಿಕವಾಗಿ ಚುನಾವಣೆಯನ್ನು ಎದುರಿಸುತ್ತೇವೆ. ಈಗಾಗಲೇ ಯಾರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು ಎನ್ನುವ ಸಮೀಕ್ಷೆ ಕೂಡ ಮಾಡಲಾಗುತ್ತಿದೆ. ಅಂತಿಮವಾಗಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ. ಟಿಕೆಟ್ ಪಡೆಯುವುದಕ್ಕಾಗಿಯೇ ಪೈಪೋಟಿ ನಡೆಸುವುದಲ್ಲ" ಎಂದು ಹೇಳಿದರು.