ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ : ಬೆಳಗಾವಿಗೆ ಬಂದು ಕರ್ಮ ಭೂಮಿ, ಕರ್ಮ ಭೂಮಿ ಎನ್ನುತ್ತಿದ್ದಾರೆ. ನಾವೇನು ಹುಚ್ಚರಾ? ಬೆಳಗಾವಿ ಜಿಲ್ಲೆಯ ಜನರನ್ನು ಬಕ್ರಾ ಮಾಡಲು ಬಂದಿದ್ದೀರಾ..? ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ಗೆ ತಿರುಗೇಟು ಕೊಟ್ಟಿದ್ದಾರೆ.
ಗೋಕಾಕ್ನಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶೆಟ್ಟರ್ ಏನ್ ಮಾಡಿದ್ದಾರೆ ಬೆಳಗಾವಿಗೆ? ಬೆಳಗಾವಿ ದೊಡ್ಡ ಜಿಲ್ಲೆ, ಜನಸಂಖ್ಯೆ ಹೆಚ್ಚಿದೆ. ಕೊರೊನಾ ಸಂದರ್ಭದಲ್ಲಿ ಜಿಲ್ಲೆಗೆ ಆಕ್ಸಿಜನ್ ಹಂಚಿಕೆ ಮಾಡಿದ್ದನ್ನು ಹುಬ್ಬಳ್ಳಿ-ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದೇ ಕರ್ಮ ಭೂಮಿಯಾ? ಜಿಲ್ಲಾ ಉಸ್ತುವಾರಿ ಸಚಿವರಿದ್ದರಲ್ಲ, ಕರ್ಮ ಭೂಮಿ ಎನ್ನಲು ಏನು ಮಾಡಿದ್ದಾರೆ ಬೆಳಗಾವಿಗೆ? ಎಂದು ಪ್ರಶ್ನಿಸಿದರು.
6 ಬಾರಿ ಹುಬ್ಬಳ್ಳಿ ಜನರು ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ವಿರೋಧ ಪಕ್ಷದ ನಾಯಕರಾದರು, ಮಂತ್ರಿಯಾದರು ಅಷ್ಟೇ ಅಲ್ಲದೆ ಮುಖ್ಯಮಂತ್ರಿಯೂ ಆಗಿದ್ದರು. ಎಲ್ಲವನ್ನೂ ಅನುಭವಿಸಿದಂತವರನ್ನು ಹುಬ್ಬಳ್ಳಿ- ಧಾರವಾಡ ಜನರು ಹೊರಗೆ ಹಾಕಿದ್ದಾರೆ. ಈಗ ಇಲ್ಲಿಗೆ ಬಂದು ಕರ್ಮ ಭೂಮಿ ಎನ್ನಲು ಏನಿದೆ?. ಬೆಳಗಾವಿಗೆ ನಿಮ್ಮ ಕೊಡುಗೆ ಏನಾದರೂ ಇದೆಯಾ?. ನಾಚಿಕೆಯಾಗಬೇಕು ನಿಮಗೆ ಎಂದು ಹೆಬ್ಬಾಳ್ಕರ್ ವಾಗ್ದಾಳಿ ಮಾಡಿದರು.
ಗೋ ಬ್ಯಾಕ್ ಶೆಟ್ಟರ್ ಎನ್ನುವುದು ಅವರ ಪಕ್ಷದ ಕಾರ್ಯಕರ್ತರೇ ಮಾಡುತ್ತಿರುವ ಅಭಿಯಾನ. ಅವರ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಮೋದಿ, ರಾಹುಲ್ ಗಾಂಧಿಯವರು ಎಲ್ಲೋ ಹೋಗಿ ಚುನಾವಣೆಗೆ ನಿಂತಿದ್ದಾರೆ ಎಂದು ತಮ್ಮ ಬೆಳಗಾವಿ ಸ್ಪರ್ಧೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರೇನು ಮೋದಿ, ರಾಹುಲ್ರಷ್ಟು ದೊಡ್ಡವರಾ ಎಂದು ಹರಿಹಾಯ್ದರು.
ಚುನಾವಣೆಗಾಗಿ ಸಚಿವೆ ಹೆಬ್ಬಾಳ್ಕರ್ ಕೇಸರಿ ಶಾಲಿನ ಮೊರೆ ಹೋಗಿದ್ದಾರೆ ಎಂಬ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲ ಚುನಾವಣೆ ವಿಚಾರಗಳೇ ಅಲ್ಲ. ಸಂಸದರು ಯಾರು?. ಅವರ ಜವಾಬ್ದಾರಿ ಏನು?. ದೆಹಲಿಗೆ ಜನ ಯಾಕೆ ಕಳಿಸ್ತಾರೆ ಅಂತಾ ತಿಳಿಯಬೇಕು. ನನ್ನ ಈಗ ಜನ ವಿಧಾನಸಭೆಗೆ ಕಳಿಸಿದ್ದಾರೆ. ಒಂದೇ ವರ್ಷದಲ್ಲಿ 1 ಸಾವಿರ ಕೋಟಿ ರೂ. ಅನುದಾನ ತಂದಿದ್ದೇನೆ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಅಭಿವೃದ್ಧಿಯ ಬಗ್ಗೆ ವಿಷನ್ ಇರಬೇಕು. ಕೇಸರಿ ಮತ್ತೊಂದು ವಿಚಾರ ಏಕೆ ಬೇಕು. ಸಂಸತ್ತಿನಲ್ಲಿ ಈ ಭಾಗದ ಜನರ ಧ್ವನಿಯಾಗಿ ಟೇಬಲ್ ಕುಟ್ಟಿ ಮಾತನಾಡುವ ನಾಯಕ ಬೇಕು. ಅಂತಹ ನಾಯಕರು ದೆಹಲಿಗೆ ಹೋಗಬೇಕು. ಅದರ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ಏನೇನೋ ಮಾತನಾಡಬೇಡಿ ಎಂದು ಕಿಡಿಕಾರಿದರು.
ಅರಭಾವಿ, ಗೋಕಾಕದಲ್ಲಿ ಕಾಂಗ್ರೆಸ್ ಮತಗಳು ಬರುತ್ತವಾ? ಎಂಬ ಮಾಧ್ಯಮಗಳ ಪ್ರಶ್ನೆಗೆ, ರಾಜಕಾರಣ ನಿಂತ ನೀರಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸವೇ ಇರಲಿಲ್ಲ. ಒಂದಲ್ಲ ಎರಡು ಬಾರಿ ಅಲ್ಲಿ ಗೆದ್ದು ಇತಿಹಾಸ ನಿರ್ಮಾಣ ಆಗಿದೆ. ನಾವು ಅಲ್ಲಿ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದೇವೆ. ಗ್ರಾಮೀಣ ಕ್ಷೇತ್ರದಲ್ಲಿ ನಮ್ಮ ಜಾತಿಯೇ ಇಲ್ಲ. ಅಲ್ಲಿಯೇ ನಾವು ಇತಿಹಾಸ ನಿರ್ಮಿಸಿದ್ದೇವೆ. ಸತೀಶ್ ಜಾರಕಿಹೊಳಿಯವರ ನಾಯಕತ್ವ, ಗ್ಯಾರಂಟಿಗಳ ಮೇಲೆ ನನಗೆ ವಿಶ್ವಾಸವಿದೆ. ನನ್ನ ರಕ್ತ ಹರಿಯುತ್ತಿರುವ ಮೃಣಾಲ್ ಭವಿಷ್ಯದ ಮೇಲೆ ನನಗೆ ವಿಶ್ವಾಸವಿದೆ. ಹಾಗಾಗಿ, ಅರಭಾವಿ, ಗೋಕಾಕನಲ್ಲಿ ಜನ ಆಶೀರ್ವಾದ ಮಾಡ್ತಾರೆ ಎಂದರು.
ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಎಂಬ ಶೆಟ್ಟರ್ ಹೇಳಿಕೆ ವಿಚಾರಕ್ಕೆ, ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಇಲ್ಲಿಗೆ ಬಂದು ಬಿಜೆಪಿಯನ್ನು ಶೆಟ್ಟರ್ ಬೈದರು. ಪ್ರಧಾನಿ ಮೋದಿಯನ್ನು ಬಿಡದೆ ಶೆಟ್ಟರ್ ಬೈದಿದ್ದರು. ಈಗ ಬಿಜೆಪಿಗೆ ಹೋಗಿ ಶೆಟ್ಟರ್ ರಿವರ್ಸ್ ಗೇರ್ ಹಾಕಿ ಮೋದಿ ಮತ್ತೆ ಪ್ರಧಾನಿ ಆಗಬೇಕು ಅಂತಿದ್ದಾರೆ. ಸಂಪೂರ್ಣವಾಗಿ ನೈತಿಕತೆ ಇಲ್ಲದ ಅಭ್ಯರ್ಥಿಯನ್ನ ಬಿಜೆಪಿಯವರು ಬೆಳಗಾವಿಗೆ ಕೊಟ್ಟಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಿಡಿಕಾರಿದರು.
ಇದನ್ನೂ ಓದಿ :ಜ್ಞಾನ ದೇಗುಲವಿದು, ಧೈರ್ಯದಿಂದ ಪ್ರಶ್ನಿಸಿ ಎಂದು ಬರೆದರೆ ತಪ್ಪೇನು; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ