ಕರ್ನಾಟಕ

karnataka

ETV Bharat / state

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಟ್ವಿಸ್ಟ್​ - ಹಿಟ್ ಅಂಡ್​ ರನ್ ಕೇಸ್ ದಾಖಲು: ಎಸ್ಪಿ ಡಾ.ಭೀಮಾಶಂಕರ ಗುಳೇದ - MINISTER CAR ACCIDENT

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರಿನ ಅಪಘಾತವನ್ನು ಹಿಟ್ ಅಂಡ್​ ರನ್ ಎಂದು ಪರಿಗಣಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

MINISTER CAR ACCIDENT
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರಿನ ಅಪಘಾತದ ಕುರಿತು ಮಾಹಿತಿ ನೀಡುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ. (ETV Bharat)

By ETV Bharat Karnataka Team

Published : Jan 15, 2025, 7:29 PM IST

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸರ್ಕಾರಿ‌ ವಾಹನ ಅಪಘಾತ ಸಂಬಂಧ ಹಿಟ್ ಅಂಡ್​ ರನ್ ಪ್ರಕರಣ ಎಂದು ಪರಿಗಣಿಸಿದ್ದೇವೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಅಪಘಾತಕ್ಕೆ ಕಾರಣವಾದ ಕ್ಯಾಂಟರ್​ಗೆ ಬಲೆ ಬೀಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಕಿತ್ತೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಶಿವಪ್ರಸಾದ ಗಂಗಾಧರಯ್ಯ ಅವರು ದೂರು ನೀಡಿದ್ದಾರೆ. ದೂರಿನ ಪ್ರಕಾರ ಆ ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಈರಪ್ಪ ಹುಣಶಿಕಟ್ಟಿ ಮತ್ತು ಚಾಲಕ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಅಂಬಡಗಟ್ಟಿ ಕ್ರಾಸ್ ಬಳಿ ಒಂದು ಕಂಟೇನರ್ ಟ್ರಕ್ ಬಲಗಡೆಯಿಂದ ಎಡಗಡೆಗೆ ಬಂತು.‌ ಈ ವೇಳೆ ಇವರ ಕಾರಿನ ಬಲಭಾಗಕ್ಕೆ ತಾಗಿದೆ. ಅದರಿಂದ ಮುಂದೆ ಆಗಲಿದ್ದ ಹೆಚ್ಚಿನ ಅನಾಹುತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಸರ್ವೀಸ್ ರಸ್ತೆಗಿಳಿದು ಕಾರು ಮರಕ್ಕೆ ಗುದ್ದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರಿನ ಅಪಘಾತದ ಕುರಿತು ಮಾಹಿತಿ ನೀಡುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ. (ETV Bharat)

ಪಂಚೆನಾಮೆಗೆ ತೆರಳಿದಾಗ ಅಲ್ಲಿ ಕಾರಿರಲಿಲ್ಲ:ವಾಹನವನ್ನು ಪಂಚನಾಮೆ ನಡೆಸಲು ಪೊಲೀಸರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಕಾರು ಇರಲಿಲ್ಲ. ಸಚಿವರ ಕಡೆಯವರು ಆ ಕಾರನ್ನು ಟೊಯೋಟಾ ಶೋರೂಂಗೆ ಸಾಗಿಸಿದ್ದರು. ಅಲ್ಲಿಯೇ ಹೋಗಿ ನಮ್ಮ ಪೊಲೀಸರು ಪಂಚನಾಮೆ ಮಾಡಿದ್ದಾರೆ. ಇನ್ನು ಕಾರಿನ ಬಲಬದಿಗೆ ಗುದ್ದಿರುವ ನಿಶಾನೆಗಳು ಸಿಕ್ಕಿವೆ. ಕಾರಿಗೆ ತಾಗಿದ ಕ್ಯಾಂಟರ್​ಗೆ ಶೋಧಕಾರ್ಯ ಮುಂದುವರಿಸಿದ್ದೇವೆ ಎಂದು ಡಾ. ಭೀಮಾಂಶಕರ ಗುಳೇದ ತಿಳಿಸಿದರು.

ಸಚಿವರ ಜೊತೆಗೆ ಬೆಂಗಾವಲು ವಾಹನ ಇರಲಿಲ್ಲ. ಅಲ್ಲದೇ ಸಚಿವ ಬರುವ ಕುರಿತು ನಮಗೂ ಮಾಹಿತಿ ನೀಡಿರಲಿಲ್ಲ. ಇನ್ನು ಬೇರೆ ವಾಹನಗಳು ಓಡಾಡಲು ಸಮಸ್ಯೆ ಆಗಬಾರದು. ಅದೇ ರೀತಿ ಮತ್ತೆ ಬೇರೆ ಅಪಘಾತಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಆ ಕಾರನ್ನು ಅಲ್ಲಿಂದ ಅವರೇ ಸಾಗಿಸಿದ್ದಾರೆ. ಅಲ್ಲದೇ ಮೊದಲು ಸಚಿವರು ಸೇರಿದಂತೆ ನಾಲ್ವರು‌ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕವೇ ಆ ಕಾರನ್ನು ಸ್ಥಳಾಂತರಿಸಲಾಗಿದೆ. ಹಾಗಾಗಿ, ಕೂಲಂಕುಶವಾಗಿ ತನಿಖೆ ನಡೆಸಿ ವಸ್ತುಸ್ಥಿತಿ ವರದಿಯನ್ನು ನಾವು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಎಸ್​ಪಿ ಗುಳೇದ ಹೇಳಿದರು.

ಹೊಸ ಕಾನೂನಿನ ಪ್ರಕಾರ ಹೀಗೆ ಮಾಡಬೇಕಿದೆ;ಕ್ಯಾಂಟರ್ ವಾಹನ ಚಾಲಕ ಅಪಘಾತಕ್ಕೀಡಾದ ವಾಹನದಲ್ಲಿ ಇರುವವರಿಗೆ ಸಹಾಯ ಮಾಡದೇ ಇರುವುದು ತಪ್ಪು. ಹೊಸ ಕಾನೂನಿನ ಪ್ರಕಾರ ಈ ರೀತಿ ಹಿಟ್ ಅಂಡ್ ರನ್ ಮಾಡಿದ ಪ್ರಕರಣದಲ್ಲಿ ಅದರಲ್ಲೂ ಹೆದ್ದಾರಿಗಳಲ್ಲಿ ಅಪಘಾತಕ್ಕೆ ಒಳಗಾದವರಿಗೆ ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ವಿಚಾರವನ್ನು ಯಾರೂ ಮರೆಯಬಾರದು. ಹಾಗಾಗಿ, ಸಚಿವರ ಕಾರಿನ ಅಪಘಾತವನ್ನು ಹಿಟ್ ಆಂಡ್ ರನ್ ಎಂದು ಪರಿಗಣಿಸಿದ್ದೇವೆ ಎಂದರು.

ಗನ್ ಮ್ಯಾನ್ ಈರಪ್ಪ ಹುಣಶಿಕಟ್ಟಿ ಮೊದಲು ದೂರು ನೀಡಲು ಬಂದಿದ್ದರು. ಅದರಲ್ಲಿ ಸಮಯ ಮತ್ತು ಸ್ಥಳದ ಸ್ಪಷ್ಟಿಕರಣ ಇಲ್ಲದ ಹಿನ್ನೆಲೆಯಲ್ಲಿ ಚಾಲಕ ದೂರು ನೀಡಿದ್ದಾರೆ. ಈಗಾಗಲೇ 2 ತಂಡಗಳನ್ನು ರಚಿಸಿ, ಕಾರಿಗೆ ಗುದ್ದಿ ಪರಾರಿಯಾಗಿರುವ ಕ್ಯಾಂಟರ್​ಗೆ ಶೋಧ ಕಾರ್ಯ ಮಾಡಲಾಗುತ್ತಿದೆ. ಇನ್ನು ಅಪಘಾತ ನಡೆದ ಸಮಯದಲ್ಲಿ ಸುಮಾರು 42 ಕ್ಯಾಂಟರ್​ಗಳು ಟೋಲ್​ಗೇಟ್ ದಾಟಿವೆ. ಅವುಗಳನ್ನೂ ಪರಿಶೀಲಿಸಲಾಗುತ್ತಿದೆ. ದೂರಿನಲ್ಲಿ ಯಾವುದೇ ರಾಜಕೀಯ ವೈಷಮ್ಯಗಳ ಉಲ್ಲೇಖವಿಲ್ಲ. ಆದರೂ ಎಲ್ಲ ಆಯಾಮಗಳಿಂದ ತನಿಖೆಯನ್ನು ನಡೆಸಲಾಗುವುದು. ಸ್ಥಳ ಪರಿಶೀಲಿಸಿದಾಗ ಅಲ್ಲಿ ಯಾವುದೇ ಪೂರ್ವ ನಿಯೋಜನೆ ಕಂಡು ಬಂದಿಲ್ಲ ಎಂದು ಡಾ. ಭೀಮಾಶಂಕರ ಗುಳೇದ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಲಕ್ಷ್ಮೀ ಹೆಬ್ಬಾಳ್ಕರ್​​ರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಅವಶ್ಯಕತೆಯಿಲ್ಲ: ಡಾ. ರವಿ ಪಾಟೀಲ - DR RAVI PATIL

ABOUT THE AUTHOR

...view details