ಚಿಕ್ಕಮಗಳೂರು:ನಿರಂತರ ಮಳೆಯಿಂದ ಮನೆ, ತೋಟ, ಗುಡ್ಡ ಕುಸಿತ ಉಂಟಾಗಿರುವ ಸ್ಥಳಗಳು ಸೇರಿದಂತೆ ಜಿಲ್ಲೆಯಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದು, ಕಾಫಿ ತೋಟ, ಸೇತುವೆ ನಾಶ, ಮನೆ ಕುಸಿದ ಸ್ಥಳಗಳ ಪರಿಶೀಲನೆ ನಡೆಸಿದರು.
ಅಲ್ಲಂಪುರ, ಮುಳ್ಳಯ್ಯನಗಿರಿ, ಕವಿಕಲ್ ಗಂಡಿ, ದತ್ತಪೀಠ ರಸ್ತೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಿದ್ದು, ಗ್ರಾಮಸ್ಥರ ಜೊತೆ ಸಚಿವರು ಹಾನಿ ಬಗ್ಗೆ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಅನಾಹುತ ಹಾಗೂ ಅವಘಡಗಳ ಮಾಹಿತಿ ಕಲೆ ಹಾಕಿದರು. ಜನರು ತಮ್ಮ ಸಂಕಷ್ಟವನ್ನು ಸಚಿವರ ಬಳಿ ತೋಡಿಕೊಂಡಿದ್ದು, ಕಷ್ಟದಲ್ಲಿದ್ದ ಜನರಿಗೆ ಸಾಂತ್ವನ ಹೇಳಿದರು. ಈ ವೇಳೆ ಕಾಂಗ್ರೆಸ್ ಶಾಸಕರು, ಮುಖಂಡರು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಜೊತೆಗಿದ್ದರು.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸೆಂಬರ್ ವೇಳೆಗೆ ಸರ್ಕಾರ ಬಿದ್ದು ಹೋಗುತ್ತೆ ಎನ್ನುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, "ಬಿಜೆಪಿ-ಜೆಡಿಎಸ್ ಏನಾದ್ರೂ ಮಾಡಿ ಸರ್ಕಾರ ಉರುಳಿಸಬೇಕು ಅಂತಿದ್ದಾರೆ. ಜನರಿಂದ ಆಯ್ಕೆಯಾಗಿರೋ ಕರ್ನಾಟಕದ ಸರ್ಕಾರವನ್ನು ಉರುಳಿಸಬೇಕು ಎನ್ನುವುದು ಅವರ ಪ್ರಯತ್ನ. ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಕುಮಾರಸ್ವಾಮಿ ಮಂತ್ರಿಯಾಗಿದ್ದಾರೆ. ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ಸ್ವಾಮಿ? ಕಾಂಗ್ರೆಸ್ ಸರ್ಕಾರವನ್ನು ಬೀಳಿಸಬೇಕೆಂಬುದು ಒಂದೇನಾ ನಿಮ್ಮ ಕೊಡುಗೆ? ಸರ್ಕಾರವನ್ನು ಬೀಳಿಸುವುದಕ್ಕೆ, ಎತ್ತುವುದಕ್ಕೆ ವೋಟ್ ಹಾಕಿರುವ ಜನರಿದ್ದಾರೆ. ನೀವೆಲ್ಲಾ ಸೇರಿ ಸೆಂಟ್ರಲ್ನಲ್ಲಿ ಸರ್ಕಾರ ರಚನೆ ಮಾಡಿದ್ದೀರಲ್ಲಾ? ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು" ಎಂದು ಪ್ರಶ್ನಿಸಿದರು.