ಬೆಂಗಳೂರು:ಬಿಜೆಪಿ ನಾಯಕರು ಅಧಿಕಾರಿಗಳನ್ನೂ ದುರುಪಯೋಗಪಡಿಸಿಕೊಂಡು ಇಡೀ ವ್ಯವಸ್ಥೆಯನ್ನೇ ಅವಮಾನಿಸುವ ರೀತಿ ಚುನಾವಣೆ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಸರ್ಜಿಕಲ್ ಸ್ಟ್ರೈಕ್ ಆಗಿದ್ದು, ಈ ಗೋಲ್ಮಾಲ್ ಪ್ರಕರಣವನ್ನು ಚುನಾವಣಾ ಅಧಿಕಾರಿಗಳು ನ್ಯಾಯಯುತ ತನಿಖೆ ನಡೆಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಚುನಾವಣಾ ಖರ್ಚಿಗಾಗಿ ಬಿಜೆಪಿ ನಾಯಕರು ಅಕ್ರಮವಾಗಿ ಸಾಗಾಟ ನಡೆಸಿದ್ದ 2 ಕೋಟಿ ರೂ. ಹಣವನ್ನು ಚುನಾವಣಾ ಅಧಿಕಾರಿಗಳು ಶನಿವಾರ ಕಾಟನ್ಪೇಟೆಯಲ್ಲಿ ಸೀಜ್ ಮಾಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಆದರೆ, ಆದಾಯ ತೆರಿಗೆ ಅಧಿಕಾರಿಗಳು ಸೀಜ್ ಮಾಡಲಾದ ಹಣಕ್ಕೆ ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಕ್ಲೀನ್ ಚಿಟ್ ನೀಡಿ, ಹಣವನ್ನೂ ಬಿಜೆಪಿಗೆ ಹಿಂತಿರುಗಿಸಿದೆ. ಇದು ಹೇಗೆ ಸಾಧ್ಯವಾಯಿತು?'' ಎಂದು ಪ್ರಶ್ನಿಸಿದ್ದಾರೆ.
''ಸಿಕ್ಕಿಬಿದ್ದ ಹಣಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿರುವ ಬಿಜೆಪಿ ಮಾರ್ಚ್ 27ರಂದೇ 5 ಕೋಟಿ ರೂ. ಹಣವನ್ನು ಕೆನರಾ ಬ್ಯಾಂಕ್ನಿಂದ ವಿತ್ಡ್ರಾ ಮಾಡಿ ಇಟ್ಟುಕೊಂಡಿರುವುದಾಗಿ ತಿಳಿಸಿದೆ. ಅಲ್ಲದೆ, ಈ ಹಣವನ್ನು ಚುನಾವಣಾ ಖರ್ಚಿಗಾಗಿ ಮೈಸೂರು, ಚಾಮರಾಜನಗರ ಹಾಗೂ ಮಂಗಳೂರಿಗೆ ಕಳುಹಿಸುತ್ತಿರುವುದಾಗಿ ಮಾಹಿತಿ ನೀಡಿದೆ. ಆದರೆ, ಈ ದಾಖಲೆಗಳು ಎಷ್ಟರಮಟ್ಟಿಗೆ ಸಾಚಾತನ ಹೊಂದಿವೆ. ನೀತಿ ಸಂಹಿತೆ ನಿರ್ದಿಷ್ಟಗೊಳಿಸಿರುವ ಶೇ.90ರಷ್ಟು ಹಣವನ್ನು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಖರ್ಚು ಮಾಡಿದ್ದು, ಈ ಬಗ್ಗೆ ಅಧಿಕಾರಿಗಳು ಕನಿಷ್ಠ ತನಿಖೆ ನಡೆಸದೆ ಹೋದದ್ದು ವಿಪರ್ಯಾಸ'' ಎಂದು ಅವರು ಅಸಮಾಧಾನ ಹೊರಹಾಕಿದರು.
''ಅಲ್ಲದೆ, ಕಳೆದ ಒಂದು ತಿಂಗಳಿನಿಂದ ಬಿಜೆಪಿ ಒಂದು ರೂಪಾಯಿಯನ್ನೂ ಚುನಾವಣೆಗಾಗಿ ಖರ್ಚು ಮಾಡಿಲ್ಲವೇ? ಹೀಗೆ ಯಾವುದೋ ಉದ್ದೇಶಕ್ಕೆ ಬ್ಯಾಂಕಿನಿಂದ ಹಣ ಪಡೆದ ದಾಖಲೆಗಳನ್ನು ತೋರಿಸಿದಾಕ್ಷಣ ಅದರ ಸಾಚಾತನದ ಬಗ್ಗೆ ಕಿಂಚಿತ್ತೂ ತನಿಖೆ ನಡೆಸದೆ, ಬೆಳಕಿನ ವೇಗದಲ್ಲಿ ಅಧಿಕಾರಿಗಳು ಹಣವನ್ನು ಹಿಂತಿರುಗಿಸಿದ್ದಾರೆ. ಹೀಗೆ ಯಾವುದೋ ದಾಖಲೆಗಳನ್ನು ತೋರಿಸಿ ಕಳ್ಳತನದಿಂದ ಸಿಕ್ಕಿಬಿದ್ದ ಹಣವನ್ನು ಬಿಡಿಸಿಕೊಳ್ಳುವುದಾದರೆ ಚುನಾವಣೆ ಪಾವಿತ್ರ್ಯತೆ ಉಳಿಯುವುದು ಹೇಗೆ ಸಾಧ್ಯ. ನಾವೂ ಹೀಗೆ ಹಣದ ಮೂಲಕ ವಹಿವಾಟು ನಡೆಸಿದರೆ ನಮ್ಮ ಎಲ್ಲಾ ವಹಿವಾಟನ್ನು ಮನ್ನಾ ಮಾಡ್ತೀರಾ? ಅಧಿಕಾರಿಗಳ ಇಂತಹ ವರ್ತನೆ ಚುನಾವಣೆ ಕಾನೂನು ಅಡಿ ನಡೆಯುತ್ತಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ'' ಎಂದರು.