ಉಪ್ಪಿನಂಗಡಿ (ದಕ್ಷಿಣ ಕನ್ನಡ): ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರು ಬದುಕುಳಿದಿದ್ದಾರೆ. ಪತಿಯೊಂದಿಗೆ ಜಗಳವಾಡಿ ಬೇಸರಗೊಂಡ ಮಹಿಳೆ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಲೆತ್ನಿಸುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಪ್ಪಿಸಿದ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.
16 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ಜೋಡಿಯ ನಡುವೆ ವಿರಸ ಮೂಡಿದ್ದು, ಗುರುವಾರ ರಾತ್ರಿ ಗಂಡ ಹೆಂಡತಿಯ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಇದರಿಂದ ಬೇಸರಗೊಂಡ ಮಹಿಳೆ ಮನೆಯಿಂದ ನಾಲ್ಕು ಕಿ.ಮೀ. ದೂರದ ಉಪ್ಪಿನಂಗಡಿಗೆ ನಡೆದುಕೊಂಡೇ ಬಂದು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಲು ಸೇತುವೆ ಮೇಲೆ ಕುಳಿತಿದ್ದರು. ಇದನ್ನು ಗಮನಿಸಿ ಸಂಶಯಗೊಂಡ ಬೈಕ್ ಸವಾರರೊಬ್ಬರು ಈ ಬಗ್ಗೆ ಸ್ಥಳೀಯ ಸಾಮಾಜಿಕ ಮುಂದಾಳು ಯು.ಟಿ. ಫಯಾಜ್ ಅವರಿಗೆ ವಿಷಯ ತಿಳಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಫಯಾಜ್ ಸೇತುವೆಯ ದಂಡೆಯಲ್ಲಿ ಕುಳಿತು ಇನ್ನೇನು ಹಾರಬೇಕೆನ್ನುವಂತಿದ್ದ ಮಹಿಳೆಯನ್ನು ಕ್ಷಿಪ್ರಗತಿಯಿಂದ ಎಳೆದು ರಕ್ಷಿಸಿದರು. ಬಳಿಕ ಸಮೀಪದಲ್ಲೇ ಇರುವ ತನ್ನ ಮನೆಗೆ ಕರೆದೊಯ್ದು ಕುಟುಂಬಸ್ಥರೊಂದಿಗೆ ಸಂತೈಸಿ ನಂತರ ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೊಪ್ಪಿಸಿದರು.
ಸಾಕಿದ ಮನೆಯಾಕೆಯ ಆತ್ಮಹತ್ಯೆ ತಡೆಯಲು ಯತ್ನಿಸಿತೇ ಸಾಕುನಾಯಿ! ಪತಿಯೊಂದಿಗೆ ಮುನಿಸಿಕೊಂಡು ಮನೆಯಿಂದ ರಾತ್ರಿ ನಡೆದುಕೊಂಡ ಬಂದ ಮಹಿಳೆಯನ್ನು ಸಾಕು ನಾಯಿಯೂ ಸೇತುವೆಯ ಬಳಿವರೆಗೂ ಹಿಂಬಾಲಿಸಿಕೊಂಡು ಬಂದಿದೆ. ಇದರಿಂದಲೇ ಆಟೋ ಚಾಲಕ ಮಹಿಳೆಯನ್ನು ಗಮನಿಸಿ ಫಯಾಜ್‌ಗೆ ಮಾಹಿತಿ ನೀಡಿದರು ಎನ್ನಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದರೂ ಕ್ಷುಲ್ಲಕ ವಿಚಾರಕ್ಕೆ ತಪ್ಪು ನಿರ್ಧಾರ ತೆಗೆದುಕೊಂಡು ಜೀವ ಕಳೆದುಕೊಳ್ಳುತ್ತಿದ್ದ ಮಹಿಳೆಗೆ ಪೊಲೀಸರು ಬುದ್ಧಿಮಾತು ಹೇಳಿದ್ದಾರೆ. ಶುಕ್ರವಾರದಂದು ಪತಿ - ಪತ್ನಿಯನ್ನು ಕರೆಯಿಸಿ ಪೊಲೀಸರು ಕೌನ್ಸಿಲಿಂಗ್ ನಡೆಸಿದ್ದಾರೆ. ಮಕ್ಕಳಿಬ್ಬರು ತಂದೆಯೊಂದಿಗೆ ಇರಲು ಇಚ್ಛಿಸಿದರೆ, ಮಹಿಳೆ ತನ್ನ ತಾಯಿಯ ಜೊತೆ ಹೋಗುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಫಯಾಜ್ ಅವರು, ರಾತ್ರಿ ಸುಮಾರು 9.30 ರ ಹೊತ್ತಿಗೆ ಪಿಲಿಗೂಡು ಅಜಿರ ಎಂಬಲ್ಲಿಂದ ಮಹಿಳೆಯೊಬ್ಬಳು ಕಾಡು ದಾರಿಯಲ್ಲಿ ನಡೆಯುತ್ತಾ ನೇತ್ರಾವತಿ ಸೇತುವೆಯತ್ತ ಬರುತ್ತಿದ್ದಾಳೆ ಎಂಬುದಾಗಿ ರಿಕ್ಷಾ ಚಾಲಕರೊಬ್ಬರು ತಿಳಿಸಿದ್ದರು. ಕೂಡಲೇ ತಾನು ಅವರನ್ನು ಹಿಂಬಾಲಿಸಿದೆ. ಮಹಿಳೆಯ ಜೊತೆಗೆ ಅವರದ್ದೇ ಸಾಕು ನಾಯಿಯೂ ಹಿಂಬಾಲಿಸುತ್ತಿತ್ತು. ಏನೋ ಅನಾಹುತ ಗ್ರಹಿಸಿ ನಾಯಿ ಅವರನ್ನು ಹಿಂಬಾಲಿಸಿರಬಹುದು. ಎಲ್ಲಿಗೆ ಎಂದು ಮಹಿಳೆಗೆ ಕೇಳಿದಾಗ ಮೌನಿಯಾಗಿ ಮಹಿಳೆ ಮುಂದೆ ಸಾಗುತ್ತಾರೆ. ಮತ್ತೆ ಕೇಳಿದಾಗ ಸೇತುವೆಯ ಬದಿಯ ಗೋಡೆಯ ಮೇಲೆ ಏರುತ್ತಾರೆ. ಕೂಡಲೇ ಅವರನ್ನು ಎಳೆದು ರಸ್ತೆಯ ಬದಿಗೆ ಹಾಕಿದೆ. ನಂತರದಲ್ಲಿ ಅವರನ್ನು ಸ್ನೇಹಿತರೊಂದಿಗೆ ನನ್ನ ಮನೆಗೆ ಕರೆದುಕೊಂಡು ಹೋಗಿ ಮನೆಯವರ ಮೂಲಕ ಉಪಚರಿಸಿ ಸಮಾಧಾನ ಪಡಿಸಿದ್ದೇವೆ. ಮಹಿಳೆಯ ಮನೆಯವರಿಗೆ ವಿಚಾರ ಮುಟ್ಟಿಸಿದರೂ ರಾತ್ರಿ 11 ಗಂಟೆಯವರೆಗೂ ಯಾರೂ ಬಾರದ ಕಾರಣ ಪತ್ರಕರ್ತ ಮಿತ್ರರಿಗೆ ವಿಷಯ ತಿಳಿಸಿ ನಂತರ ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದೆ. ಓರ್ವ ಸಹೋದರಿಯ ಜೀವ ಉಳಿಸಿದ ನೆಮ್ಮದಿ ತನಗಿದೆ. ಆತ್ಮಹತ್ಯೆ ಯಾವುದಕ್ಕೂ ಒಂದು ಪರಿಹಾರವಲ್ಲ ಎಂದು ಫಯಾಜ್ ಹೇಳಿದರು.
ಇದನ್ನೂ ಓದಿ: ಗ್ರಾ.ಪಂ.ಗಳಲ್ಲಿ ಜನನ, ಮರಣ ನೋಂದಣಿ ಜುಲೈ 1ರಿಂದ ಪ್ರಾರಂಭ: ಶುಲ್ಕ ಮಾಹಿತಿ ಹೀಗಿದೆ - BIRTH AND DEATH REGISTRATION