ಬೆಳಗಾವಿ:ಸಾಕು ನಾಯಿ, ಬೆಕ್ಕುಗಳ ಅಂತ್ಯಕ್ರಿಯೆಗೆ ಚಿತಾಗಾರ ಸ್ಥಾಪಿಸಲು ಕ್ರಮ ವಹಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ)ಗೆ ಸೂಚನೆ ನೀಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್, ಸಾಕು ನಾಯಿ, ಸಾಕು ಬೆಕ್ಕುಗಳು ಸತ್ತಾಗ ಅಂತಿಮ ಕ್ರಿಯೆಗೆ ಯಾವ ವ್ಯವಸ್ಥೆ ಇದೆ?. ಬೆಂಗಳೂರು ನಗರದಲ್ಲಿ ಮೂರು ಕಡೆಯಾದರೂ ಸಾಕು ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, ಸಾಕು ಪ್ರಾಣಿಗಳು ಅಗಲಿದಾಗ ಎಂಥವರಿಗೂ ನೋವಾಗುತ್ತದೆ. ಅವುಗಳ ಗೌರವಾರ್ಥ ವಿಲೇವಾರಿಗೂ ವ್ಯವಸ್ಥೆ ಇಲ್ಲ ಅಂದಾಗ ನೋವು ಇನ್ನೂ ಹೆಚ್ಚಾಗುತ್ತದೆ. ಎಷ್ಟೇ ಜನ ಅವುಗಳನ್ನು ಪ್ರಾಣಿಗಳಂತೆ ನೋಡದೇ, ಕುಟುಂಬದ ಸದಸ್ಯರಂತೆ ಸಾಕಿರುತ್ತಾರೆ. ಕುಟುಂಬದ ಅವಿಭಾಜ್ಯ ಭಾಗವಾಗಿದ್ದ ಪ್ರಾಣಿಗಳು ಸತ್ತಾಗ ಅವುಗಳ ವಿಲೇವಾರಿ ಮಾಡಲು ನಗರದಲ್ಲಿ ವ್ಯವಸ್ಥೆ ಇಲ್ಲ. ಅದಕ್ಕೆ ಎಲ್ಲೋ ಕಾಲುವೆಗೆ ಎಸೆಯಲು ಅವರಿಗೆ ನೋವಾಗುತ್ತದೆ. ಪ್ರಾಣಿಗಳ ಗೌರವಯುತ ಅಂತ್ಯಸಂಸ್ಕಾರದ ಅಗತ್ಯವಿದೆ. ಇದರ ಬಗ್ಗೆ ಬಿಬಿಎಂಪಿಯವರಿಗೆ ಸೂಚನೆ ಕೊಡ್ತೇವೆ ಎಂದರು.