ಬೆಂಗಳೂರು : ಒಳ ಮೀಸಲಾತಿ ಜಾರಿ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಸಚಿವ ಕೆ. ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಒದಗಿಸುವ ಬೇಡಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ಇಂದು ಸಭೆ ನಡೆಯಿತು.
ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿದರು (ETV Bharat) ಸಭೆ ಬಳಿಕ ಮಾತನಾಡಿದ ಸಚಿವ ಕೆ. ಹೆಚ್ ಮುನಿಯಪ್ಪ, ಸುಪ್ರೀಂಕೋರ್ಟ್ನ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಇಂದು ನಮ್ಮ ಸಮುದಾಯದ ಎಲ್ಲಾ ಮಂತ್ರಿಗಳು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಸಭೆಯನ್ನು ನಡೆಸಿದ್ದೇವೆ. ಮುಖ್ಯಮಂತ್ರಿಗಳು ಮುಂದಿನ ಕ್ಯಾಬಿನೆಟ್ನಲ್ಲಿ ಇದರ ಕುರಿತು ಚರ್ಚೆ ನಡೆಸಿ, ಅಂತಿಮವಾಗಿ ಹೈಕಮಾಂಡ್ನ ಒಪ್ಪಿಗೆ ಪಡೆದು ಜಾರಿಗೊಳಿಸಲು ಬದ್ಧರಾಗಿದ್ದಾರೆ ಎಂದರು.
ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ನೇಮಕಾತಿಗಳು ಆಗದಂತೆ ಅವುಗಳನ್ನ ರದ್ದು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದೇವೆ. ಯಾವುದೇ ನೇಮಕಾತಿ ಮಾಡದಿರಲು ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ನಾವು ಜಾರಿ ಮಾಡಿ ಎಂದು ಬೇಡಿಕೆ ಇಟ್ಟಿದ್ದೇವೆ. ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳಬೇಕು. ಸಿಎಂ ಕ್ಯಾಬಿನೆಟ್ ತೀರ್ಮಾನ ಮಾಡ್ತೇವೆ ಅಂದಿದ್ದಾರೆ. ಕುಳಿತು ಚರ್ಚೆ ಮಾಡಿ ನಿರ್ಧರಿಸೋಣ ಅಂದಿದ್ದಾರೆ. ಜಾತಿ ಗಣತಿಯನ್ನ ಜಾರಿ ಮಾಡಬೇಕು. ಕ್ಯಾಬಿನೆಟ್ ಮುಂದೆ ಅದನ್ನ ತರಬೇಕು. ಎಲ್ಲರ ವಿಶ್ವಾಸಗಳಿಸಿ ತರಬೇಕು. ಯಾವುದೇ ಸಮುದಾಯದ ವಿರೋಧ ಇಲ್ಲ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್. ಆಂಜನೇಯ, ಮಾದಿಗ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ. ನಮ್ಮದು ಸಫಾಯಿ ಕರ್ಮಚಾರಿ ಉದ್ಯೋಗ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ನ್ಯಾಯ ಕೊಡಿಸಲು ಸರ್ಕಾರ ಕಮಿಟಿ ಮಾಡಿತ್ತು. ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಕೊಟ್ಟಿದೆ. ರಾಜ್ಯ ಸರ್ಕಾರವೇ ಮಾಡಬಹುದು ಅಂತ ಹೇಳಿದೆ. ಇಂದು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ವಿ. ಮುಂದಿನ ಸಂಪುಟದಲ್ಲಿ ಚರ್ಚೆ ಮಾಡೋಕೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ನೀತಿ ಸಂಹಿತೆ ನೋಡಿ ಮುಂದುವರೆಯುತ್ತೇವೆ ಅಂದಿದ್ದಾರೆ. ನೊಡೋಣ ಏನು ಮಾಡ್ತಾರೆ. ನಮ್ಮ ಸರ್ಕಾರ ಒಳ ಮೀಸಲಾತಿ ಮಾಡುವ ಉದ್ದೇಶವಿದೆ. ಅದಕ್ಕೆ ಸದಾಶಿವ ಆಯೋಗ ನೇಮಿಸಿತ್ತು. ಹಸಿವಿನಿಂದ ಸಾಯ್ತಿರುವವರು ನಾವು. ಹೊಟ್ಟೆ ಹಸಿದವರು ನಾವು ಕೇಳ್ತೇವೆ. ಅವರು ಯಾರೂ ವಿರೋಧ ಮಾಡಿಲ್ಲ. ಸೈಲೆಂಟ್ ಇದ್ದಾರೆ ಅಂದ್ರೆ ಸಮ್ಮತಿ ಅಂತ ಅರ್ಥ. ನಾವು ಯಾರ ಬಗ್ಗೆಯೂ ಮಾತನಾಡಲ್ಲ. 30 ವರ್ಷದಿಂದ ನಾವು ಹೋರಾಟ ಮಾಡಿದ್ದೇವೆ. ನಮಗೆ ಒಳ ಮೀಸಲಾತಿ ಕೊಡಬೇಕು ಎಂದು ಹೇಳಿದರು.
ಸಭೆಯಲ್ಲಿ ಸಚಿವರಾದ ಕೆ. ಹೆಚ್ ಮುನಿಯಪ್ಪ, ತಿಮ್ಮಾಪುರ್, ಮಾಜಿ ರಾಜ್ಯಸಭಾ ಸದಸ್ಯರಾದ ಎಲ್. ಹನುಮಂತಯ್ಯ, ಮಾಜಿ ಸಚಿವ ಶಿವಣ್ಣ, ಹೆಚ್. ಆಂಜನೇಯ, ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ಶಾಸಕರಾದ ಬಸಂತಪ್ಪ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ :'ಪಂಚಮಸಾಲಿ ಮೀಸಲಾತಿ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸರ್ಕಾರ ವಿಫಲ, ಮುಂದಿನ ಹೋರಾಟದ ಬಗ್ಗೆ ಚರ್ಚೆ'