ಕರ್ನಾಟಕ

karnataka

ETV Bharat / state

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ; ಕಾಂಗ್ರೆಸ್​ ನಾಯಕರು ಹೇಳುವುದೇನು? - CM Siddaramaiah Prosecution - CM SIDDARAMAIAH PROSECUTION

ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಕುಗ್ಗಿಸಲು ಮತ್ತು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯಪಾಲರ ಮೂಲಕ ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದಾರೆ.

BENGALURU  MINISTER ISHWAR KHNADRE  CM PROSECUTION  MUDA LAND SCAM
ಕಾಂಗ್ರೆಸ್​ ನಾಯಕರು ಹೇಳುವುದೇನು (ETV Bharat)

By ETV Bharat Karnataka Team

Published : Aug 17, 2024, 11:44 AM IST

Updated : Aug 17, 2024, 1:41 PM IST

ಬೆಂಗಳೂರು:ಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಷನ್ ಗೆ ಅನುನತಿ ನೀಡಿದ ರಾಜ್ಯಪಾಲರ ನಡೆಯನ್ನು ಸಚಿವರು, ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈ ಗೊಂಬೆ ಎಂದು ಆರೋಪಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಈಗ ತಾನೇ ನನಗೂ ಸುದ್ದಿ ಬಂದಿದೆ. ಯಾವ ರೀತಿ ಅನುಮತಿ ಕೊಟ್ಟಿದ್ದಾರೋ ನೋಡಬೇಕು. ಕಾನೂನಾತ್ಮಕ ಹೋರಾಟ ಮಾಡ್ತೇವೆ ಅಂತಾ ಮೊದಲೇ ಹೇಳಿದ್ದೇವೆ. ಸಿಎಂ ಲೀಗಲ್ ಟೀಮ್ ಜೊತೆ ಚರ್ಚೆ ಮಾಡಿ ಮುಂದೆ ಹೋಗ್ತಾರೆ. ಕ್ಯಾಬಿನೆಟ್ ಅಡ್ವೈಸ್ ಮಾಡಿದ್ಮೇಲೂ ಕೊಟ್ಟಿದ್ದಾರೆ. ಕೊಡಲ್ಲ ಅಂದುಕೊಂಡಿದ್ವಿ. ಅವರಿಗೆ ಮೊದಲಿನಿಂದಲೂ ಮೇಲಿನಿಂದ ಒತ್ತಡ ಇದೆ ಅನ್ನೋದು ಸ್ಪಷ್ಟ ಇದೆ ಎಂದು ಆರೋಪಿಸಿದರು.

ನಿಖರವಾದ ಮಾಹಿತಿಗಳು, ಸಿಎಂ ಆದೇಶ ಕೊಟ್ಟಿರೋದಾಗಲೀ, ಮೌಖಿಕ ಆದೇಶ ಕೊಟ್ಟಿರೋದಾಗಲೀ‌ ಇಲ್ಲ. ನಾವು ಎಳೆ ಎಳೆಯಾಗಿ ಶೋಕಾಸ್ ನೋಟೀಸ್​ಗೆ ಉತ್ತರ ಕೊಟ್ಟಿದ್ವಿ. ಆದ್ರೂ ಕೊಟ್ಟಿದ್ದಾರೆ, ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿಕೊಂಡಿದ್ದಾರೆ. ರಾಜಭವನದಲ್ಲಿ ಏನ್ ಬೆಳವಣಿಗೆ ಆಗುತ್ತೋ ನಮಗೆ ಗೊತ್ತಿಲ್ಲ. ಪ್ರಾಸುಕ್ಯೂಷನ್​ಗೆ ಅನುಮತಿ ಕೇಳಿರೋರ ಜೊತೆ ಚರ್ಚೆ ಮಾಡಬಹುದು ಗವರ್ನರ್. ದ್ವೇಷದ ರಾಜಕಾರಣ ಅನ್ಸುತ್ತೆ. ನೇರವಾಗಿ ಸಿಎಂ ಯಾವುದರಲ್ಲೂ ಇನ್ವಾಲ್ವ್ ಆಗಿಲ್ಲ. ಬಿಜೆಪಿಯವರು ರಾಜೀನಾಮೆ ಕೇಳೋದು ಸ್ವಾಭಾವಿಕ. ಇದನ್ನೆಲ್ಲಾ ಎದುರಿಸ್ತೀವಿ ಎಂದರು.

ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆ:ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದು, ರಾಜಭವನವು ಬಿಜೆಪಿ ಕಚೇರಿಯಾಗಿದೆ. ಮುಡಾ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದು ಷಡ್ಯಂತ್ರದ ಒಂದು ಭಾಗವಾಗಿದೆ. ಇದಕ್ಕೆ ಬಿಜೆಪಿಯವರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ‌‌.ಬಿ ಪಾಟೀಲ್ ಕಿಡಿಕಾರಿದ್ದಾರೆ.

ಟಿ ಜೆ ಅಬ್ರಹಾಂ ಅವರು ಸಿಎಂ ವಿರುದ್ಧ ದೂರು ಕೊಟ್ಟಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿಗಳು ರಾಜಭವನಕ್ಕೆ ಸಮರ್ಪಕ ಮಾಹಿತಿ ಕೊಟ್ಟಿದ್ದರು. ಆದರೂ ರಾಜ್ಯಪಾಲರು ತರಾತುರಿಯಲ್ಲಿ ಸಿದ್ದರಾಮಯ್ಯನವರಿಗೆ ನೋಟೀಸ್ ಕೊಟ್ಟರು. ಆಗಲೇ ಅವರ ಮೇಲೆ ಅನುಮಾನ ಬಂದಿತ್ತು. ಈಗಿನ ಅವರ ನಡೆ ಅನಪೇಕ್ಷಣೀಯವಾಗಿದೆ. ಇದನ್ನು ರಾಜ್ಯದ ಜನತೆ ಸಹಿಸಿಕೊಳ್ಳುವುದಿಲ್ಲ' ಎಂದರು.

ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನ:ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿರುವ ಸರ್ಕಾರವನ್ನು ದುರ್ಬಲಗೊಳಿಸಲು ಬಿಜೆಪಿ ರಾಜಭವನವನ್ನು ಸಾಧನವಾಗಿ ದುರುಪಯೋಗಪಡಿಸಿಕೊಳ್ಳತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯಪಾಲರ ಕ್ರಮವನ್ನು ಟೀಕಿಸಿರುವ ಸಚಿವರು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರು ತಮ್ಮ ರಾಜಕೀಯ ಯಜಮಾನರನ್ನು ಸಮಾಧಾನಪಡಿಸಲು ಸಾಂವಿಧಾನಿಕ ಬಿಕ್ಕಟ್ಟನ್ನು ಹುಟ್ಟುಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ತನ್ನ ಎಷ್ಟೇ ಶಕ್ತಿಯನ್ನು ಪ್ರಯೋಗಿಸಿದರೂ, ನಾವು ನಮ್ಮ ಪರವಾಗಿ ಸಂವಿಧಾನದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದೂ ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.

ಈಶ್ವರ್​ ಖಂಡ್ರೆ ಆಕ್ರೋಶ: "ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಇವರನ್ನು ರಾಷ್ಟ್ರಪತಿಗಳು ತಕ್ಷಣವೇ ವಜಾ ಮಾಡಬೇಕು" ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜಕೀಯ ಪ್ರೇರಿತವಾಗಿ ಮಾಡಿರುವ ಆರೋಪವನ್ನೇ ಆಧಾರವಾಗಿಟ್ಟುಕೊಂಡು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದು ಸರಿಯಲ್ಲ. ರಾಜಕೀಯ ದ್ವೇಷ ಮತ್ತು ಒತ್ತಡಕ್ಕೆ ಮಣಿದು ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ" ಎಂದು ಕಿಡಿಕಾರಿದರು.

ಸಿಎಂ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ:ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ನೋಡಿದಾಗ ಅವರು ಯಾವ ಮಟ್ಟಕ್ಕಿಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ. ಗವರ್ನರ್ ಬಿಜೆಪಿಯ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಇದೊಂದು ಷಡ್ಯಂತರದ ಭಾಗ ಎಂಬುದು ಮೊದಲೇ ನಮಗೆ ಗೊತ್ತಿದೆ. ಮೋದಿ ಸರ್ಕಾರ ಎಲ್ಲಾ ಸಂವಿಧಾನಿಕ ಹುದ್ದೆಗಳನ್ನು ಸರ್ವನಾಶ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ. ರಾಜ್ಯಪಾಲರ ಕಚೇರಿ ಈಗ ಬಿಜೆಪಿ ಕಚೇರಿ ಆಗಿದೆ. ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಇದಕ್ಕೆಲ್ಲಾ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ ಎಂದರು.

ಹೆಬ್ಬಾಳ್ಕರ್​ ವಾಗ್ದಾಳಿ:ಈ ಹಿಂದೆ ಕುಮಾರಸ್ವಾಮಿ, ನಿರಾಣಿ, ಜೊಲ್ಲೆ ಅವರ ವಿರುದ್ಧ ಪ್ರಾಸಿಕ್ಯೂಷನ್ ನೀಡುವಂತೆ ಕೇಳಿಕೊಂಡಾಗ ರಾಜ್ಯಪಾಲರು ಅನುಮತಿ ಕೊಟ್ಟಿರಲಿಲ್ಲ. ಈಗ ತರಾತುರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಕೊಟ್ಟಿದ್ದು, ರಾಜಕೀಯ ಪ್ರೇರಿತ. ಈ ವಿಚಾರದಲ್ಲಿ ನಾವು ಗಾಬರಿ ಪಡುವ ಪ್ರಮೇಯವೇ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕಕರ್ ವಿಶ್ವಾಸ ವ್ಯಕ್ತಪಡಿಸಿದರು‌.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಲ್ಲೆಲ್ಲಿ ಬಿಜೆಪಿ ಹೊರತು ಪಡಿಸಿ ಬೇರೆ ಪಕ್ಷಗಳ ಚುನಾಯಿತ ಸರ್ಕಾರ ಆಡಳಿದಲ್ಲಿವೆ. ಅಲ್ಲೆಲ್ಲಾ ಬಿಜೆಪಿ ಇಂತ ಪ್ರಯೋಗಗಳನ್ನು ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಸಾಂವಿಧಾನಿಕ ಹುದ್ದೆ ಹೊಂದಿರುವ ರಾಜ್ಯಪಾಲರು, ತಮಿಳುನಾಡು ಸೇರಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಆ ರೀತಿ ಇಲ್ಲ ಎಂಬ ಅಭಿಮಾನವಿತ್ತು. ಆದರೆ, ಇಂದು ಅವರು ಪ್ರಾಸಿಕ್ಯೂಷನ್​ಗೆ ಒಪ್ಪಿಕೊಂಡಿದ್ದು, ನಮ್ಮ ಇವತ್ತು ದುರ್ದೈವ. ಇದರ ಹಿಂದೆ ಬಿಜೆಪಿ ಹೈಕಮಾಂಡ್ ರಾಜ್ಯಪಾಲರಿಗೆ ಎಷ್ಟರ ಮಟ್ಟಿಗೆ ಒತ್ತಡ ಹಾಕಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ದೂರಿದರು.

ಇದನ್ನೂ ಓದಿ:ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ - Prosecution Against CM Siddaramaiah

Last Updated : Aug 17, 2024, 1:41 PM IST

ABOUT THE AUTHOR

...view details