ಬೆಂಗಳೂರು: ಬೆಂಗಳೂರು ನಗರದ ಬೃಹತ್ ಕಟ್ಟಡ ಸಮುಚ್ಚಯಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಅದನ್ನು ಪುನರ್ಬಳಕೆಗಾಗಿ ಮಾರಾಟ ಮಾಡಲು ಅವಕಾಶ ನೀಡುವ ಕುರಿತಂತೆ ಮಾನದಂಡಗಳನ್ನು ರೂಪಿಸಿ ಒಂದು ವಾರದೊಳಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ವೆಟ್ ಲ್ಯಾಂಟ್ ಅಥಾರಿಟಿ (ಕರ್ನಾಟಕ ಜೌಗುಭೂಮಿ ಪ್ರಾಧಿಕಾರ)ದ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ರಾಜಧಾನಿಯಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮೂಲಗಳ ರಕ್ಷಣೆ ಮತ್ತು ನೀರಿನ ಮರುಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸೂಕ್ತ ರೀತಿಯಲ್ಲಿ ನೀರು ಸಂಸ್ಕರಿಸಿದರೆ ಬೆಂಗಳೂರು ನಗರದಲ್ಲಿ ನಿತ್ಯ 250ರಿಂದ 300 ಎಂ.ಎಲ್.ಡಿ.ಯಷ್ಟು ನೀರು ಮರು ಬಳಕೆಗೆ ಲಭಿಸಲಿದೆ. ಆದರೆ ಈ ನೀರನ್ನು ಯಾವುದೇ ಕಾರಣಕ್ಕೂ ಕುಡಿಯಲು, ಔಷಧ ಮತ್ತು ಆಹಾರ ತಯಾರಿಕೆಗೆ ಬಳಸದಂತೆ ನಿರ್ಬಂಧಿಸಲಾಗುವುದು. ಮಾರಾಟ ಮಾಡಲಾಗುವ ಮರುಬಳಕೆ ನೀರಿನ ಶುದ್ಧತೆಯ ಜವಾಬ್ದಾರಿ ಕಟ್ಟಡ ಸಮುಚ್ಚಯಗಳ ಸಂಘಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿಡಬ್ಲ್ಯುಎಸ್.ಎಸ್.ಬಿ ಮತ್ತಿತರೆ ಪೂರಕ ಸಂಸ್ಥೆಗಳ ಮೇಲೂ ಇರುತ್ತದೆ ಎಂದರು.
ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಜಲವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಆ ನೀರನ್ನು ಹತ್ತಿರದ ಕೆರೆಗಳಿಗೆ ಕೊಳವೆಯ ಮೂಲಕ ಹರಿಸಿದರೆ ಕೆರೆಗಳಲ್ಲಿ ನೀರೂ ಇರುತ್ತದೆ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಈ ಕುರಿತಂತೆ ಇಂದು ತಮ್ಮ ಕಚೇರಿಯಲ್ಲಿ ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ, ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಕಟ್ಟಡ ಸಮುಚ್ಚಯಗಳ ನಿವಾಸಿಗಳ ಸಂಘದ ಪ್ರತಿನಿಧಿಗಳು ಹಾಗೂ ಬಾಧ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಕ್ಕಿಪಕ್ಷಿಗಳು ಹೆಚ್ಚಾಗಿ ಇರುವ ಮತ್ತು 2.25 ಹೆಕ್ಟೇರ್ ಗಿಂತ ಹೆಚ್ಚು ವ್ಯಾಪ್ತಿಯ ಕೆರೆ, ಕುಂಟೆಗಳನ್ನು ಜೌಗು ಭೂಮಿಯೆಂದು ಗುರುತಿಸಲು ತೀರ್ಮಾನಿಸಲಾಗಿದೆ. ಇಂತಹ 16,700ಕ್ಕೂ ಅಧಿಕ ಜೌಗು ಭೂಮಿ ತಾಣಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಬಂಧಿತ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅನುಮತಿ ಪಡೆದು ಅದನ್ನು ಅಧಿಕೃತವಾಗಿ ಜೌಗು ಭೂಮಿ ಪ್ರದೇಶ ಎಂದು ಘೋಷಿಸಲಾಗುವುದು. 2017ರಲ್ಲಿ ಕೇಂದ್ರ ಸರ್ಕಾರ ಜೌಗು ಪ್ರದೇಶ ಘೋಷಣೆ ಮತ್ತು ಅಭಿವೃದ್ಧಿಗೆ ಮಾನದಂಡಗಳನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದು, ಈವರೆಗೆ ರಾಜ್ಯದಲ್ಲಿ ಜೌಗು ಭೂಮಿಯ ಅಧಿಕೃತ ಪ್ರಕಟಣೆ ಆಗಿರಲಿಲ್ಲ. ಹೀಗಾಗಿ ತಾವು ಈ ಬಗ್ಗೆ ಆಸಕ್ತಿ ತೋರಿದ್ದು, ಕೂಡಲೇ ತಜ್ಞರ ತಂಡ ರೂಪಿಸಿ ಜೌಗು ಭೂಮಿ ಪ್ರಾಧಿಕಾರವನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಇಂದು ಬಿಡುಗಡೆ ಮಾಡಲಾದ ಅಂತರ್ಜಾಲ ತಾಣದಲ್ಲಿ ಸಾರ್ವಜನಿಕರಿಗೆ ಜೌಗು ಪ್ರದೇಶ ಘೋಷಣೆಯಿಂದ ಆಗುವ ಪ್ರಯೋಜನಗಳ ಬಗ್ಗೆ, ಕಾಯ್ದೆ, ನಿಯಮ ನಿಬಂಧನೆಗಳ ಕುರಿತಂತೆ ಮಾಹಿತಿ ನೀಡುವುದರ ಜೊತೆಗೆ ಜೌಗು ಭೂಮಿಯಲ್ಲಿ ತ್ಯಾಜ್ಯ ಸುರಿಯದಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ರಾಜ್ಯದಲ್ಲಿ 4 ತಾಣಗಳನ್ನು ರಾಮ್ಸರ್ ತಾಣಗಳೆಂದು ಘೋಷಿಸಲಾಗಿದೆ. ಅದೇ ರೀತಿ ನಾವು ಜೌಗು ಭೂಮಿಗಳನ್ನು ಸಂರಕ್ಷಿಸಿದರೆ, ಅಭಿವೃದ್ಧಿ ಪಡಿಸಿದರೆ, ರಾಜ್ಯದಲ್ಲಿ ಇನ್ನೂ ಹೆಚ್ಚಿನ ಜೌಗುಭೂಮಿ ಪ್ರದೇಶ ಮಾಡಲು ಸಾಧ್ಯ ಎಂದು ತಿಳಿಸಿದರು.
ಕಾಂಗ್ರೆಸ್ ಯಾವ ಸಮುದಾಯವನ್ನ ಸಹ ನಿರ್ಲಕ್ಷ್ಯ ಮಾಡಿಲ್ಲ:ರಾಜ್ಯದಲ್ಲಿ ದಲಿತ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ಕರ್ನಾಟಕದ ಕಾಂಗ್ರೆಸ್ಗೆ ಅವರೇ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಯಾವ ಸಮುದಾಯವನ್ನ ಸಹ ನಿರ್ಲಕ್ಷ್ಯ ಮಾಡಿಲ್ಲ. ಎಲ್ಲ ಸಮುದಾಯಗಳಿಗೂ ಅವಕಾಶ ನೀಡಿದೆ ಎಂದರು.
ಟಿಕೆಟ್ ಆಕಾಂಕ್ಷಿ ನಾನಲ್ಲ:ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ. ನನ್ನ ಮಗ ಟಿಕೆಟ್ ಕೇಳಿರಬಹುದು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಟಿಕೆಟ್ ಕೇಳುವುದಕ್ಕೆ ಅವಕಾಶವಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಈ ಬಾರಿ ಬೀದರ್ನಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೋಲಾರದ ವಿವಿಧೆಡೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ದಿನೇಶ್ ಗುಂಡೂರಾವ್