ಕರ್ನಾಟಕ

karnataka

ಕಲುಷಿತ ತಿಪ್ಪಗೊಂಡನಹಳ್ಳಿ ಡ್ಯಾಂ ಬಗ್ಗೆ ಚರ್ಚೆಗೆ ಸಭೆ ನಡೆಸುವಂತೆ ಸಿಎಂಗೆ ಸಚಿವ ಖಂಡ್ರೆ ಆಗ್ರಹ - Thippagondanahalli Dam

By ETV Bharat Karnataka Team

Published : Sep 12, 2024, 3:29 PM IST

ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಶುದ್ಧೀಕರಿಸಿ ಕಟ್ಟಡ ನಿರ್ಮಾಣ, ಕೈಗಾರಿಕೆಗಳ ಬಳಕೆಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಸಚಿವರ ಸಭೆ ಕರೆಯುವಂತೆ ಸಿಎಂ ಸಿದ್ದರಾಮಯಯ್ಯಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.

thippagondanahalli dam
ಈಶ್ವರ್ ಖಂಡ್ರೆ, ಸಿಎಂ ಸಿದ್ದರಾಮಯಯ್ಯ (ETV Bharat)

ಬೆಂಗಳೂರು:ಕಲುಷಿತಗೊಂಡಿರುವ ಕಾರಣ ಬಳಕೆಯಾಗದೆ ಇರುವ ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಶುದ್ಧೀಕರಿಸಿ ಕಟ್ಟಡ ನಿರ್ಮಾಣ, ಕೈಗಾರಿಕೆಗಳ ಬಳಕೆಗೆ ಪೂರೈಕೆ ಮಾಡಲು ಅನುವಾಗುವಂತೆ ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಸಚಿವರ ಸಭೆ ಕರೆದು ಸಮಾಲೋಚಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಪ್ರಸ್ತುತ ತ್ಯಾಜ್ಯ ನೀರು ಸೇರ್ಪಡೆಯಾಗಿ ಕಲುಷಿತವಾಗಿರುವ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಬೆಂಗಳೂರಿನ ವಿವಿಧ ಕೆರೆಗಳ ಬಳಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ನೀರು ಶುದ್ಧೀಕರಿಸಿ ಕಟ್ಟಡ ನಿರ್ಮಾಣ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡಿದರೆ, ಅದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಜೊತೆಗೆ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದೂ ತಗ್ಗುತ್ತದೆ ಎಂದು ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಪತ್ರ (ETV Bharat)

ಅಂತರ್ಜಲ ಮಟ್ಟ ಕಾಯ್ದುಕೊಳ್ಳಲೂ ಅನುಕೂಲ:ಬೆಂಗಳೂರಿನ ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಟ್ಟಡ ನಿರ್ಮಾಣಕ್ಕೆ ಮಾರಾಟ ಮಾಡುವ ಪರಿಸರ ಇಲಾಖೆಯ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ತರುವಾಯ ನೀತಿ ರೂಪಿಸಲಾಗಿದೆ. ಈ ನಿರ್ಧಾರಕ್ಕೆ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಿಯಲ್ ಎಸ್ಟೇಟ್ ಸಂಸ್ಥೆಗಳ ಸಭೆಯಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ತ್ಯಾಜ್ಯ ನೀರು ಸಂಸ್ಕರಿಸಿ ಮಾರಾಟ ಮಾಡುತ್ತಿರುವುದರಿಂದ ಬಹುಮಹಡಿ ಕಟ್ಟಡಗಳಿಗೆ ಆದಾಯವೂ ಬರುತ್ತಿದೆ ಜೊತೆಗೆ ಕಟ್ಟಡ ನಿರ್ಮಾಣದಾರರಿಗೆ ನೀರೂ ಲಭ್ಯವಾಗುತ್ತಿದೆ. ತ್ಯಾಜ್ಯ ನೀರು ಕೆರೆ, ನದಿ ಸೇರುವುದೂ ತಪ್ಪುತ್ತದೆ. ಜೊತೆಗೆ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಕೃತಿ, ಪರಿಸರ ಉಳಿಸುವ ದೃಷ್ಟಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಇತರ ಕೆರೆಗಳ ನೀರನ್ನು ಶುದ್ಧೀಕರಿಸಿ ಕೈಗಾರಿಕೆ, ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಪರಿಸರ, ಜಲ ಸಂಪನ್ಮೂಲ, ಸಣ್ಣ ನೀರಾವರಿ ಸಚಿವರುಗಳ ಸಭೆ ಕರೆದು ಸಮಾಲೋಚಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಸಚಿವ ಈಶ್ವರ್ ಖಂಡ್ರೆ ಕೋರಿದ್ದಾರೆ.

ಇದನ್ನೂ ಓದಿ:ಶಕ್ತಿ ಯೋಜನೆ ಸೇರಿ ಎಲ್ಲ ಗ್ಯಾರಂಟಿಗಳೂ ನಮ್ಮ ಸರ್ಕಾರ ಇರುವವರೆಗೂ ಇರಲಿವೆ: ಸಿಎಂ ಸಿದ್ದರಾಮಯ್ಯ - CM Siddaramaiah

ABOUT THE AUTHOR

...view details