ಬೆಂಗಳೂರು: "ನಟ ದರ್ಶನ್ ಬಂಧನ ಪ್ರಕರಣದಲ್ಲಿ ಕಾನೂನು ಪ್ರಕಾರವೇ ಕ್ರಮ ವಹಿಸಲಾಗಿದೆ. ದರ್ಶನ್ ವಿಐಪಿ ಎನ್ನುವ ಕಾರಣಕ್ಕೆ ವಿಶೇಷ ಅನುಕೂಲತೆ ಮಾಡಿಕೊಟ್ಟಿಲ್ಲ, ಮಾಡಿ ಕೊಡುವುದೂ ಇಲ್ಲ. ಪೊಲೀಸ್ ಠಾಣೆಯಲ್ಲಿ ಶಾಮಿಯಾನ ಹಾಕಿರುವುದು ಗೌಪ್ಯ ವಿಚಾರಣೆಗಲ್ಲ, ಹೆಚ್ಚುವರಿಯಾಗಿ ನಿಯೋಜಿತರಾದ ಸಿಬ್ಬಂದಿಯ ಅನುಕೂಲಕ್ಕಾಗಿ" ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ದರ್ಶನ್ ಅವರನ್ನು ಬಂಧಿಸಿಟ್ಟಿರುವ ಪೊಲೀಸ್ ಠಾಣೆಯನ್ನು ಶಾಮಿಯಾನ ಹಾಕಿ ಮುಚ್ಚಲು ಅವಕಾಶ ಇದೆಯೇ ಎಂಬ ಪ್ರಶ್ನೆಯೇ ಬರಲ್ಲ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಆದರೆ ಠಾಣೆಗೆ ಟೆಂಟ್ ಹಾಕುವ ಅವಶ್ಯಕತೆ ಇದೆಯೇ ಎನ್ನುವುದು ಗೊತ್ತಿಲ್ಲ. ಪ್ರಕರಣದ ಗಂಭೀರತೆ ನೋಡಿ ಠಾಣೆಗೆ 144 ಸೆಕ್ಷನ್ ಸಹಜವಾಗಿ ಹಾಕಿರುತ್ತಾರೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿದಾಗ ಅವರಿಗೆ ವ್ಯವಸ್ಥೆ ಮಾಡಲು ಟೆಂಟ್ ಹಾಕಲಾಗುತ್ತದೆ. ವಿಐಪಿಗೋಸ್ಕರ ಇದನ್ನು ಮಾಡಿಲ್ಲ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮಾಡಲಾಗಿದೆ" ಎಂದು ಹೇಳಿದರು.