ಬೆಂಗಳೂರು: "ಯುವ ಸಮುದಾಯವನ್ನು ಹಾಳು ಮಾಡುತ್ತಿರುವ ಮಾದಕ ದ್ರವ್ಯ ವಿಶ್ವಕ್ಕೆ ಆಧುನಿಕ ಪಿಡುಗು" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಪ್ರಯುಕ್ತ ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಪೊಲೀಸ್ ಇಲಾಖೆ, ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
"ಮಾದಕ ವಸ್ತುಗಳ ವ್ಯಸನದ ಸಮಸ್ಯೆಯನ್ನು ಅರ್ಥೈಸಿಕೊಂಡ ವಿಶ್ವಸಂಸ್ಥೆ 1987ರಲ್ಲಿ ಮಾದಕ ವಸ್ತು ವಿರೋಧಿ ದಿನವನ್ನು ಜೂನ್ 26ರಂದು ಆಚರಿಸಲು ನಿರ್ಣಯಿಸಿತು. ಮಾದಕ ಪದಾರ್ಥಗಳು ಸಮಾಜಕ್ಕೆ ದೊಡ್ಡ ರೋಗವಾಗಿ ಅಂಟಿಕೊಳ್ಳುತ್ತಿದ್ದು, ಯುವ ಪೀಳಿಗೆ ಸಂಕಷ್ಟಕ್ಕೆ ಸಿಲುಕದಂತೆ ಜಾಗೃತಿ ಮೂಡಿಸಬೇಕಿದೆ. ಭಾರತವು ಸಹ ಮಾದಕ ವಸ್ತುಗಳ ಸಮಸ್ಯೆಯಲ್ಲಿ ಸಿಲುಕಿದ್ದು, 5 ಕೋಟಿ ಜನ ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದಾರೆ. ಯುವಕರು ಹಾಳಾದರೆ, ದೇಶ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಬಹಳ ಎಚ್ಚರಿಕೆಯಿಂದ ದೇಶದ ಮುಂದಿನ ಭವಿಷ್ಯವನ್ನು ನೋಡಿಕೊಳ್ಳಬೇಕಿದೆ'' ಎಂದು ಕಳವಳ ವ್ಯಕ್ತಪಡಿಸಿದರು.
"ಹತ್ಯೆ ಪ್ರಕರಣಗಳನ್ನು ಪತ್ತೆ ಹಚ್ಚುವಾಗ 17ರಿಂದ 20 ವರ್ಷದೊಳಗಿನವರೆ ಹೆಚ್ಚು ಭಾಗಿಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ತಪ್ಪಿತಸ್ಥರನ್ನು ತಪಾಸಣೆಗೆ ಒಳಪಡಿಸಿದಾಗ ಮಾದಕ ವ್ಯಸನಿಯಾಗಿರುವುದು ಗೊತ್ತಾಗುತ್ತಿದೆ. ಮಾದಕ ವ್ಯಸನದಿಂದ ಸಮಾಜಕ್ಕೆ ಅಪಾಯವಿದ್ದು, ಪಾಲಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಹೆಚ್ಚು ಜಾಗೃತಿ ಮೂಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಅವರು ತಿಳಿಸಿದರು.