ಬೆಂಗಳೂರು:ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕಗ್ಗಲಿ ಕಾವಲು ಪ್ರದೇಶದ ಸರ್ವೆ ನಂ.1 ರಿಂದ 22 ರವರೆಗಿನ 301.07 ಎಕರೆ ಕಿರು ಅರಣ್ಯ ಭೂಮಿಯನ್ನು ನ್ಯಾಯಾಲಯದ ಆದೇಶದಂತೆ ಮರಳಿ ವಶಕ್ಕೆ ಪಡೆಯುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಕೃಷ್ಣೇಗೌಡ ಎಂಬವರು 2000ರಲ್ಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಡಬ್ಲ್ಯು.ಪಿ. 11835/2000)ಗೆ ಸಂಬಂಧಿಸಿದಂತೆ ಕೋರ್ಟ್ 2009ರಲ್ಲಿಯೇ ಎಲ್ಲ ಅನಧಿಕೃತ ಮಂಜೂರಾತಿಯನ್ನು ರದ್ದು ಮಾಡಿಸಿ, ಭೂಮಿಯನ್ನು ಯಥಾವತ್ ಅರಣ್ಯವಾಗಿ ಉಳಿಸಲು ತೀರ್ಪಿ ನೀಡಿದ್ದರೂ ಕ್ರಮ ವಹಿಸದ ಕಾನೂನು ವಿಭಾಗದ ಎಲ್ಲ ಎಪಿಸಿಸಿಎಫ್‌ಗಳು ಮತ್ತು ಹಾಸನ ಡಿಸಿಎಫ್ಗಳ ವಿರುದ್ಧ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ಟಿಪ್ಪಣಿಯಲ್ಲಿ ಸಚಿವರು, 'ಸದರಿ ಜಮೀನನ್ನು ವಶಕ್ಕೆ ಪಡೆಯಲು ಕ್ರಮ ವಹಿಸಲು ಮತ್ತು ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವ ಎಲ್ಲ ಎಪಿಸಿಸಿಎಫ್‌ಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ' ತಿಳಿಸಿದ್ದಾರೆ.