ಬೆಂಗಳೂರು: ದಕ್ಷಿಣ ಕನ್ನಡದಲ್ಲಿ ಆ್ಯಸಿಡ್ ದಾಳಿಯನ್ನು ಕೇರಳದಿಂದ ಬಂದು ಮಾಡಿದ್ದಾರೆ. ಅದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅರಮನೆ ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡದ ಕಡಬದಲ್ಲಿ ಆ್ಯಸಿಡ್ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೂ ಅದರ ಬಗ್ಗೆ ಬೆಳಗ್ಗೆ ಮಾಹಿತಿ ಬಂದಿದೆ. ಮಂಗಳೂರು ಎಸ್ಪಿ ಹಾಗೂ ಪಕ್ಷದ ಮುಖಂಡರು ತಿಳಿಸಿದ್ದಾರೆ. ಇದು ಅತ್ಯಂತ ಕ್ರೂರವಾದ ಘಟನೆ ಎಂದರು.
ಯಾವ ಉದ್ದೇಶದಿಂದ ಮಾಡಿದ್ದಾರೆ ಎಂಬುದನ್ನು ತನಿಖೆಯಿಂದ ಗೊತ್ತಾಗಲಿದೆ. ಅವರ ಮೇಲೆ ದ್ವೇಷ, ಕೋಪದಿಂದ ಮಾಡುವುದು ತಲೆ ತಗ್ಗಿಸುವಂತಹದ್ದನ್ನು ಯಾರು ಮಾಡಿದ್ದಾರೆ ಎಂದು ಗೊತ್ತಾಗಿದೆ. ಹುಡುಗಿ ಆರೋಗ್ಯ ಸಹಜ ಸ್ಥಿತಿಗೆ ಬರಬೇಕು. ಆ ಹುಡುಗ ಮತ್ತು ಹುಡುಗಿಗೆ ಪ್ರೇಮ ಸಂಬಂಧ ಇರಬಹುದು ಅನಿಸುತ್ತದೆ. ನಾನು ಮಂಗಳೂರಿಗೆ ನಾಡಿದ್ದು ಹೋಗುತ್ತೇನೆ. ಹೋದಾಗ ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ (ದಕ್ಷಿಣ ಕನ್ನಡ): ಯುವಕನೊಬ್ಬ ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರ್ಕಾರಿ ಕಾಲೇಜು ಬಳಿ ಸೋಮವಾರ ಬೆಳಗ್ಗೆ ನಡೆದಿದೆ. ಈ ಸಂಬಂಧ ಕೇರಳ ಮೂಲದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರೆಲ್ಲರೂ ದ್ವಿತೀಯ ಪಿಯುಸಿ ಓದುತ್ತಿದ್ದು, ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಬಿನ್ (23) ಎಂಬ ಯುವಕನನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.