ಕರ್ನಾಟಕ

karnataka

ETV Bharat / state

ಮುಂಜಾಗ್ರತಾ ಕ್ರಮವಾಗಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಗೆ ರಾಜ್ಯಾದ್ಯಂತ ತಡೆ: ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್​ ಬಳಕೆ ತಡೆಹಿಡಿದಿರುವ ಬಗ್ಗೆ ಮಾತನಾಡಿದ್ದಾರೆ.

minister-dinesh-gundu-rao
ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ (ETV Bharat)

By ETV Bharat Karnataka Team

Published : Nov 30, 2024, 3:58 PM IST

ಬೆಂಗಳೂರು : ಮುಂಜಾಗ್ರತೆ ಕ್ರಮವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನು ತಡೆಹಿಡಿಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಕುರಿತು ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಐವಿ ದ್ರಾವಣ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಅವರು ಮಾತನಾಡಿದ್ದಾರೆ (ETV Bharat)

ರಿಂಗರ್ ಲ್ಯಾಕ್ಟೇಟ್ ಗ್ಲುಕೋಸ್ ಈ ಹಿಂದಿನಿಂದಲೂ ಆಸ್ಪತ್ರೆಗಳಲ್ಲಿ ಬಳಕೆ ಮಾಡುತ್ತಾ ಬರಲಾಗುತ್ತಿದೆ. ಈ ಬಾರಿಯೂ ಔಷಧ ಸರಬರಾಜು ನಿಗಮಕ್ಕೆ 192 ಬ್ಯಾಚ್​ಗಳಲ್ಲಿ‌ ಐವಿ ದ್ರಾವಣ ಪೂರೈಕೆಯಾಗಿತ್ತು. ಇದರ ಬಳಕೆ ಸಂದರ್ಭದಲ್ಲಿ ಎರಡು ಬ್ಯಾಚ್​ಗಳ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾದಾಗ ಮುಂಜಾಗ್ರತೆ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲ 192 ಬ್ಯಾಚ್ ಗಳ ದ್ರಾವಣವನ್ನ ಆಸ್ಪತ್ರೆಗಳಲ್ಲಿ ಬಳಸದಂತೆ ತಡೆಹಿಡಿಯಲಾಗಿತ್ತು ಎಂದಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಅನುಮಾನ : ಆ ಬಳಿಕ ಕಂಪನಿಯವರು ಹೈಕೋರ್ಟ್​ನಿಂದ ಆದೇಶ ಪಡೆದ ಹಿನ್ನೆಲೆ, ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿಯಲ್ಲಿ ಟೆಸ್ಟಿಂಗ್ ನಡೆದಾಗ ದ್ರಾವಣ ಬಳಸಬಹುದು ಎಂಬ ವರದಿ ಬಂತು. ಸಿ.ಡಿ.ಎಲ್ ನವರ ವರದಿ ಹಿನ್ನೆಲೆ ರಾಜ್ಯದಲ್ಲಿ ತಜ್ಞರ ತಾಂತ್ರಿಕ ಸಮಿತಿ ರಚಿಸಿ ಟೆಸ್ಟಿಂಗ್ ನಡೆಸಿ ಸ್ಟ್ಯಾಂಡರ್ಡ್ ಕ್ವಾಲಿಟಿಯ ಕೆಲವು ಬ್ಯಾಚ್​ಗಳ ದ್ರಾವಣವನ್ನ ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ದ್ರಾವಣದ ಬಳಕೆಯಾಗಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಅನುಮಾನಗಳು ವ್ಯಕ್ತವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಅನರೋಬಿಕ್ ಟೆಸ್ಟ್​ನಲ್ಲಿ ಸ್ಪಷ್ಟತೆ ಸಿಗಲಿದೆ :ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾದ ಬ್ಯಾಚ್​ಗಳನ್ನು ಅನರೋಬಿಕ್ ಟೆಸ್ಟ್​ಗೆ ಕಳಿಸಿದ್ದೇವೆ. ಬಾಣಂತಿಯರ ಸಾವಿಗೆ ಐವಿ ದ್ರಾವಣವೂ ಒಂದು ಕಾರಣವಾಗಿರಬಹುದಾ ಅಥವಾ ಇಲ್ಲವಾ? ಎಂಬುದು ಅನರೋಬಿಕ್ ಟೆಸ್ಟ್​ನಲ್ಲಿ ಸ್ಪಷ್ಟತೆ ಸಿಗಲಿದೆ.‌ ವಾರದಲ್ಲಿ ಈ ಟೆಸ್ಟಿಂಗ್ ವರದಿ ಬರಲಿದೆ. ಆ ಬಳಿಕ ಐವಿ ದ್ರಾವಣ ಬಳಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮುಂಜಾಗ್ರತೆ ಕ್ರಮವಾಗಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ರಾಜ್ಯಾದ್ಯಂತ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

ಐವಿ ರಿಂಗರ್ ಲ್ಯಾಕ್ಟೇಟ್ ಬಳಸದಂತೆ ಸೂಚಿಸಲಾಗಿದೆ : ನಮಗೆ ಪ್ರತಿಯೊಂದು ಜೀವವೂ ಮುಖ್ಯ. ಈ ರೀತಿಯ ಅನುಮಾನಗಳು ವ್ಯಕ್ತವಾದಾಗ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಸದಂತೆ ಎಲ್ಲ‌ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ :ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯರಿಂದ ಕರ್ತವ್ಯಲೋಪ ಆಗಿಲ್ಲವೆಂದ ಸಚಿವ ದಿನೇಶ್ ಗುಂಡೂರಾವ್; ಇಂದು ಸಿಎಂ ಸಭೆ

ABOUT THE AUTHOR

...view details