ಬೆಂಗಳೂರು: ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದ ಗಾಂಧೀಜಿ ಹಾಗೂ ನಾಸ್ತಿಕರಾಗಿ ಹಿಂದೂ ರಾಷ್ಟ್ರ ಕಟ್ಟುವ ಸಾವರ್ಕರ್ ಅವರ ಜೀವನ ಶೈಲಿ ಬಗ್ಗೆ ಹೋಲಿಕೆ ಮಾಡಿದ್ದೆ. ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ಅವರ ಮೂಲಭೂತವಾದವಲ್ಲ ಎಂಬುದು ನನ್ನ ಅಭಿಪ್ರಾಯ. ಮಾಧ್ಯಮಗಳು ಸಾವರ್ಕರ್ ಮಾಂಸಹಾರಿ ಎಂಬುದನ್ನು ಮಾತ್ರ ಚರ್ಚೆಯ ವಿಷಯ ಮಾಡಿಕೊಳ್ಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವುದು ಸರಿಯಲ್ಲ. ಗಾಂಧೀವಾದ ಹಾಗೂ ಸಾವರ್ಕರ್ ಅವರ ಮೂಲಭೂತ ವಾದದ ಬಗ್ಗೆ ವಿಶ್ಲೇಷಣೆ ಮಾಡಿದ್ದೇನೆಯೇ ಹೊರತು, ಸಾವರ್ಕರ್ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಉದ್ದೇಶ ನನ್ನದಲ್ಲ ಎಂದು ತಿಳಿಸಿದ್ದಾರೆ.
ಗಾಂಧೀಜಿಯವರು ಸಸ್ಯಹಾರಿಯಾಗಿದ್ದರು. ಹಿಂದೂ ಧರ್ಮ ಹಾಗೂ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಅವರಿಗೆ ಅಪಾರ ನಂಬಿಕೆಯಿತ್ತು. ಆದರೆ, ಸಾವರ್ಕರ್ ನಾಸ್ತಿಕರಾಗಿ ಹಿಂದೂ ರಾಷ್ಟ್ರ ಕಟ್ಟಲು ಹೊರಟಿದ್ದರು. ಅವರ ಮೂಲಭೂತವಾದ ನಮ್ಮ ದೇಶದ ಸಂಸ್ಕೃತಿಯಲ್ಲ. ಅದು ಯುರೋಪ್ನಿಂದ ಬಂದಿದ್ದು. ಅಲ್ಲದೇ ಸಾವರ್ಕರ್ ಮಾಂಸಹಾರಿಯಾಗಿದ್ದರು. ಗೋ ಹತ್ಯೆಯನ್ನು ಅವರು ವಿರೋಧಿಸಿರಲಿಲ್ಲ. ಒಂದು ರೀತಿ ಅವರು ಮಾಡರ್ನಿಸ್ಟ್ ಆಗಿ ಕಾಣಿಸಿಕೊಂಡರೂ, ಅವರ ಮೂಲಭೂತವಾದ ನಮ್ಮ ದೇಶದ ಪರಂಪರೆಗೆ ವಿರುದ್ಧವಾಗಿದೆ. ಹೀಗಾಗಿ ದೇಶದಲ್ಲಿ ಗಾಂಧೀವಾದ ಗೆಲ್ಲಬೇಕು ಎಂದು ಹೇಳಿದ್ದೆ ಎಂದು ಸಚಿವ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಸಾವರ್ಕರ್ ನಾಸ್ತಿಕರು, ಮಾಂಸಹಾರಿ ಸೇವನೆ ಮಾಡುತ್ತಿದ್ದರು ಎಂಬುದನ್ನು ಅವರೇ ಹಲವು ಪ್ರಸಂಗಗಳಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ನಾನು ಹೊಸದಾಗಿ ಏನೂ ಹೇಳುತ್ತಿರುವುದಲ್ಲ. ಸಾವರ್ಕರ್ ಅವರಲ್ಲಿ ವೈಚಾರಿಕ ಚಿಂತನೆಗಳು ಇದ್ದವು. ಹಾಗೆ ನೋಡಿದರೆ ಗಾಂಧೀಜಿ ಸಂಪ್ರದಾಯಸ್ಥರು. ಹಿಂದೂ ಸಂಸ್ಕೃತಿ, ಧರ್ಮದ ಮೇಲೆ ಅಪಾರ ನಂಬಿಕೆಯಿಟ್ಟುಕೊಂಡಿದ್ದರು. ಆದರೆ, ಗಾಂಧೀಜಿಯವರದ್ದು ಡೆಮಾಕ್ರಟಿಕ್ ವ್ಯಕ್ತಿತ್ವ. ಇತರ ಧರ್ಮಗಳನ್ನು ಗೌರವಿಸುತ್ತಿದ್ದರು. ಸಾವರ್ಕರ್ ಅವರದ್ದು ಮೂಲಭೂತವಾದ. ಹೀಗಾಗಿ ಸಂಪ್ರದಾಯಸ್ಥರೆಲ್ಲ ಮೂಲಭೂತವಾದಿಗಳಲ್ಲ. ಅವರಲ್ಲೂ ಅನೇಕರು ಪ್ರಜಾಪ್ರಭುತ್ವದ ಮನಸ್ಥಿತಿ ಉಳ್ಳವರಿದ್ದಾರೆ. ಗಾಂಧೀವಾದಕ್ಕೆ ನಾವು ಹೆಚ್ಚು ಮನ್ನಣೆ ನೀಡುವ ಮೂಲಕ ಮೂಲಭೂತವಾದದ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:ಸಾವರ್ಕರ್ ಮಾಂಸಹಾರಿ, ಗೋ ಹತ್ಯೆ ವಿರೋಧಿಯಲ್ಲ: ದಿನೇಶ್ ಗುಂಡೂರಾವ್ - Dinesh Gundurao