ಬೆಂಗಳೂರು: ಕೃಷಿ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅನುವಾಗುವಂತೆ ಕ್ಷೇತ್ರ ಮಟ್ಟದಲ್ಲಿ ಖಾಲಿ ಇರುವ 750 (100 ಕೃಷಿ ಅಧಿಕಾರಿಗಳು ಮತ್ತು 650 ಸಹಾಯಕ ಕೃಷಿ ಅಧಿಕಾರಿಗಳು) ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. 2023- 2024ನೇ ಸಾಲಿನ ಕೃಷಿ ಇಲಾಖೆಯ ಸಾಧನೆ ಮತ್ತು ಬಾಕಿ ಉಳಿದ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ವಿಧಾನಸೌಧದಲ್ಲಿ ಇಂದು ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಲ್ವರು ಉಪ ಕೃಷಿ ನಿರ್ದೇಶಕರು, 292 ಸಹಾಯಕ ಕೃಷಿ ನಿರ್ದೇಶಕರು, 253 ಕೃಷಿ ಅಧಿಕಾರಿಗಳು 33 ಸಿಬ್ಬಂದಿಗಳು ಸೇರಿದಂತೆ ಒಟ್ಟು 582 ಹುದ್ದೆಗಳಿಗೆ ಮುಂಬಡ್ತಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಹುರುಪು ಮತ್ತು ಹುಮ್ಮಸ್ಸು ನೀಡಲಾಗಿದೆ (ಕಾನೂನು ತೊಡಕಿನಿಂದಾಗಿ 15 ವರ್ಷಗಳಿಂದ ಬಾಕಿ ಇದ್ದ 292 ಕೃಷಿ ಅಧಿಕಾರಿಗಳಿಗೆ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಗೆ ಮುಂಬಡ್ತಿಯನ್ನು ನೀಡಲಾಯಿತು). ಕೃಷಿ ಭಾಗ್ಯ ಯೋಜನೆಯನ್ನು ಮಳೆಯಾಶ್ರಿತ 24 ಬರ ಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಸುಮಾರು 10,000 ಕೃಷಿ ಹೊಂಡಗಳನ್ನು ನಿರ್ಮಿಸುವುದರ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕೃಷಿಯಲ್ಲಿ ಯಾಂತ್ರಿಕತೆಯನ್ನು ಪ್ರೋತ್ಸಾಹಿಸಲು 63,783 ಫಲಾನುಭವಿಗಳಿಗೆ (ಟ್ರ್ಯಾಕ್ಟರ್-370, ಪವರ್ ಟಿಲ್ಲರ್-5946, ಸ್ವಯಂಚಾಲಿತ ಕೃಷಿ ಯಂತ್ರೋಪಕರಣಗಳು-12060 ಹಾಗೂ ಟ್ರ್ಯಾಕ್ಟರ್/ಇಂಜಿನ್/ ಮೋಟಾರ್ ಚಾಲಿತ ಯಂತ್ರೋಪಕರಣಗಳು-36907) ಮತ್ತು 8500 ಕೃಷಿ ಸಂಸ್ಕರಣಾ ಘಟಕಗಳಿಗೆ 284.92 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೈಟೆಕ್ ಹಾರ್ವೆಸ್ಟರ್ ಹಬ್: 100 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, 50 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. 2.34 ಲಕ್ಷ ಫಲಾನುಭವಿಗಳಿಗೆ ಸುಮಾರು 2.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ 484.00 ಕೋಟಿ ರೂ. ಸಹಾಯಧನ ನೀಡಲಾಗಿರುತ್ತದೆ. ವಿಶೇಷ ಘಟಕ ಉಪಯೋಜನೆಯಡಿ ಎಲ್ಲಾ ಪರಿಶಿಷ್ಟ ಜಾತಿ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಸಹಾಯಧನವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.