ಮಂಡ್ಯ:"ಗಲಭೆ ಮಾಡಿಸಿದ್ದು ಕುಮಾರಸ್ವಾಮಿ ಎಂಬ ಹೇಳಿಕೆಯನ್ನು ನಾನು ಕೊಟ್ಟಿಲ್ಲ. ಹಾಗೆ ಗಲಭೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯವರು ಕೂಡ ಅದನ್ನೇ ಹೇಳಿದ್ದಾರೆ. ಹೊರಗಡೆಯವರು ನೂರು ಮಾತನಾಡಲಿ, ನನಗೆ ನಾಗಮಂಗಲ ಜನ ಬೇಕು" ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಾಗಮಂಗಲದಲ್ಲಿ ಗಲಭೆ ಮಾಡಿಸಿದ್ದು ಕುಮಾರಸ್ವಾಮಿ ಎಂಬ ಕೈ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. "ಯಾರು ಮೊದಲು ಬೆಂಕಿ ಹಾಕಿದ್ರು. ಯಾವ ಅಂಗಡಿಗೆ ಬೆಂಕಿ ಹಾಕಿದ್ರು, ಎಲ್ಲ ಮಾಹಿತಿಯೂ ಇದೆ. ಆದರೆ ನಾನು ಈ ಸಂದರ್ಭದಲ್ಲಿ ಪಕ್ಷ ಹಾಗೂ ಸಮುದಾಯದ ಬಗ್ಗೆ ಮಾತನಾಡಲ್ಲ. ಮೊದಲು ನನಗೆ ಕ್ಷೇತ್ರದ ಕಾನೂನು ಸುವ್ಯವಸ್ಥೆ ಸರಿಯಾಗಬೇಕು. ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನೊಂದು ಉನ್ನತ ಮಟ್ಟದ ವಿಶೇಷ ತನಿಖೆಯನ್ನು ಬೇಕಿದ್ರೆ ಮಾಡೋಣ. ಅದಕ್ಕೂ ಮುನ್ನ ಮಾತನಾಡುವುದು ಸೂಕ್ತವಲ್ಲ" ಎಂದರು.
ಹೆಚ್ಡಿಕೆಗೆ ನಾನು ಉತ್ತರ ಕೊಡಬೇಕಾ?:ಚನ್ನಪಟ್ಟಣದ ಉಪ ಚುನಾವಣೆಗಾಗಿ ಗಲಭೆ ಸೃಷ್ಟಿ ಎಂಬ ಹೆಚ್ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ನಾಗಮಂಗಲಕ್ಕೆ ಬಂದು ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಮಾತನಾಡ್ತಾರೆ. ಕುಮಾರಸ್ವಾಮಿ ನನ್ನ ಹಾಗೆ ಸಾಮಾನ್ಯ ಮಂತ್ರಿನಾ? ಹೆಚ್ಡಿಕೆ ಎರಡು ಬಾರಿ ಮುಖ್ಯಮಂತ್ರಿ ಆದವರು. ಅವರಿಗೆ ನಾನು ಉತ್ತರ ಕೊಡಬೇಕಾ? ನಾಗಮಂಗಲಕ್ಕೆ ಬಂದವರು ಜನರಿಗೆ ಏನು ಸಂದೇಶ ಕೊಡಬೇಕಿತ್ತು. ಆರ್.ಅಶೋಕ್ ಎಲ್ಲಿಂದ ಪರಿಹಾರ ಕೊಡ್ತೀರಾ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ನಾನು ಈಗಾಗಲೇ ಸಿಎಂ ಬಳಿ ಆ ಕುರಿತು ಮಾತನಾಡಿದ್ದೇನೆ. ಕಾನೂನಿನಲ್ಲಿ ನಷ್ಟ ಪರಿಹಾರಕ್ಕೆ ಅವಕಾಶ ಇಲ್ಲ. ಆದರೂ ಪರಿಹಾರ ಕೊಡಿಸಲು ಸಿಎಂ ಅವರನ್ನು ಒಪ್ಪಿಸಿದ್ದೇನೆ. ರಿಪೋರ್ಟ್ ತಕೊಂಡು ಸರ್ಕಾರದಿಂದ ಪರಿಹಾರ ಕೊಡುತ್ತೇನೆ. ನಾನು ವೈಯಕ್ತಿಕವಾಗಿಯೂ ಪರಿಹಾರ ನೀಡುತ್ತೇನೆ. ನಿನ್ನೆ ಕುಮಾರಸ್ವಾಮಿ ಕೂಡ ಪರಿಹಾರ ಕೊಟ್ಟಿರೋದು ಸಂತೋಷ. ಪರಿಹಾರ ಕೊಟ್ಟಿದ್ದು ತಪ್ಪಲ್ಲ. ಆದರೆ ಸಿಎಂ ಅವರನ್ನು ಇಳಿಸಲು ಕುತಂತ್ರ ಅನ್ನೋದು ಸರಿಯಲ್ಲ. ಕುಮಾರಸ್ವಾಮಿ ಹೇಳಿಕೆಗೆ ರಿಯಾಕ್ಟ್ ಮಾಡದೇ ಇರುವುದು ಸೂಕ್ತವಲ್ಲ" ಎಂದು ಹೇಳಿದರು.