ಮೈಸೂರು: "ಲೋಕಾಯುಕ್ತರು ವಾಸ್ತವ ಸ್ಥಿತಿಗತಿಗಳನ್ನು ತನಿಖೆ ಮಾಡಿ ವರದಿ ನೀಡಿದ್ದಾರೆ. ನಾನು ಮುಡಾ ಫೈಲ್ಗಳನ್ನು ತೆಗೆದುಕೊಂಡು ಹೋಗಿಲ್ಲ. ಮುಡಾ ಫೈಲ್ಗಳು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಮಾರುವ ಕಡ್ಲೆಪುರಿಯಲ್ಲ ತೆಗೆದುಕೊಂಡು ಹೋಗಲು" ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್(ಬೈರತಿ ಸುರೇಶ್) ಹೇಳಿದರು.
ಇಂದು ಚಾಮುಂಡಿ ಬೆಟ್ಟಕ್ಕೆ ಕುಟುಂಬಸಮೇತ ಭೇಟಿ ನೀಡಿ, ದೇವಿಯ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, "ಫೈಲ್ ಮಿಸ್ಸಿಂಗ್ ಅಂತಾ ಯಾವ ವರದಿಯಲ್ಲಿದೆ?. ಫೈಲ್ ಎತ್ತಿಕೊಂಡು ಹೋಗುವುದು ಅಷ್ಟೊಂದು ಸುಲಭನಾ?. ಕ್ಯಾಮೆರಾ ಸೇರಿ ಎಲ್ಲರ ಮುಂದೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ?. ಅದರಲ್ಲೂ 141 ಫೈಲ್ ಅಂತಾ ಹೇಳಿದ್ದಾರೆ. ಇವರಿಗೆ ಆ ನಂಬರ್ ನೀಡಿದವರು ಯಾರು?. ಬಹುಶಃ ಈ ಆರೋಪ ಮಾಡಿದವರೇ ಫೈಲ್ ತೆಗೆದುಕೊಂಡು ಹೋಗಿರಬೇಕು" ಎಂದರು.
ಸಚಿವ ಬೈರತಿ ಸುರೇಶ್ (ETV Bharat) "ಮುಡಾ ಹಗರಣದಲ್ಲಿ ಅಕ್ರಮ ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿ ಸಲ್ಲಿಸಿರುವ ವರದಿಯನ್ನು ಟೀಕಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ನವರಿಗೆ ಮಾನ-ಮರ್ಯಾದೆ ಇಲ್ಲ. ಮಾನ-ಮರ್ಯಾದೆ ಇಲ್ಲದವರು ಮಾತ್ರ ಲೋಕಾಯುಕ್ತ ರಿಪೋರ್ಟ್ ಅನ್ನು ಟೀಕಿಸಬೇಕು. ನಾವು ಏನೂ ತಪ್ಪು ಮಾಡಿಲ್ಲ. ಬನ್ನಿ ಚಾಮುಂಡೇಶ್ವರಿ ದೇವಿ ಮುಂದೆ ಆಣೆ ಮಾಡಿ ಅಂತ ಕರೆದಿದ್ದೆ, ಯಾರೂ ಆಣೆ ಮಾಡಲು ಬರಲಿಲ್ಲ. ಲೋಕಾಯುಕ್ತ ಬಲಶಾಲಿಯಾಗಿದೆ. ಹಿಂದಿನ ಮುಖ್ಯಮಂತ್ರಿಗಳು ತಪ್ಪು ಮಾಡಿದ್ರು, ಅವರನ್ನು ಜೈಲಿಗೆ ಕಳುಹಿಸುವಂತೆ ಮಾಡಿದ ಸಂಸ್ಥೆ ಲೋಕಾಯುಕ್ತ" ಎಂದು ತಿಳಿಸಿದರು.
"50:50ರ ಅನುಪಾತದ ಹಂಚಿಕೆಯ ಬಗ್ಗೆ ಸಾಧಕ-ಬಾಧಕಗಳನ್ನು ದೇಸಾಯಿ ಕಮಿಟಿ ನೋಡಿಕೊಳ್ಳುತ್ತದೆ. ಅವರು ನೀಡಿದ ವರದಿಯ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯದ ಜನರಿಗೆ ಈಗ ಸತ್ಯ ಗೊತ್ತಾಗಿದೆ. ಸಿದ್ದರಾಮಯ್ಯ ಯಾವತ್ತೂ ಅಕ್ರಮ ಮಾಡಿಲ್ಲ, ತಪ್ಪು ಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಮೈಸೂರು, ಮಂಗಳೂರು ಯಾತ್ರೆ ಮಾಡಿದರು. ಪಾರ್ವತಿಯವರ ಭೂಮಿ ಹೋಗಿತ್ತು, ಅದಕ್ಕೆ ಪರಿಹಾರ ಬಂದಿದೆ ಅಷ್ಟೇ" ಎಂದು ಹೇಳಿದರು.
ತಪ್ಪು ಮಾಡಿದವರ ವಿರುದ್ಧ ಕ್ರಮ:"ಲೋಕಾಯುಕ್ತ ವರದಿಯಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ತಿಳಿದು ಬಂದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಮುಡಾ ಜಮೀನು ಒತ್ತುವರಿ ಮಾಡಿ ನಿವೇಶ ಮಾಡಿದ್ದರೆ, ಭೂ ಮಾಲೀಕರಿಗೆ ಏನು ಪರಿಹಾರ ನೀಡಬೇಕು?, ಹೇಗೆ ನೀಡಬೇಕು ಎಂಬ ಸೂಚನೆಯನ್ನು ದೇಸಾಯಿ ವರದಿ ಮತ್ತು ಏಕಸದ್ಯಸ್ಯ ಪೀಠವು ವರದಿ ನೀಡಲಿದೆ. ಮುಡಾದಲ್ಲಿ ಅಕ್ರಮ ಮಾಡಿದ ಒಬ್ಬರನ್ನೂ ಬಿಡುವ ಪ್ರಶ್ನೆಯೇ ಇಲ್ಲ. 50:50 ಅಕ್ರಮದ ಬಗ್ಗೆ ಪಿ.ಎನ್.ದೇಸಾಯಿ ಆಯೋಗ ತನಿಖೆ ಮುಗಿದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದರು.
ಲೋಕಾಯುಕ್ತ ಪೂರ್ವಾಗ್ರಹಪೀಡಿತವಾಗಿ ತನಿಖೆ ನಡೆಸಿಲ್ಲ:"50:50ರ ಅನುಪಾತದಲ್ಲಿ ಪರಿಹಾರ ನೀಡುವ ಕಾನೂನು ಮುಡಾದಲ್ಲಿದೆ. ಅದರ ಅನ್ವಯ ಪರಿಹಾರ ನೀಡಲಾಗಿದೆ. ಕಾನೂನು ಇಲ್ಲದೆ ಪರಿಹಾರ ಹೇಗೆ ಕೊಡುವುದು?. ಇದು ಬಿಜೆಪಿ ಅವರ ಕಾಲದಲ್ಲೇ ಪರಿಹಾರ ನೀಡಿರುವುದು. ಪಾರ್ವತಮ್ಮ ಅವರಿಗೂ ಬಿಜೆಪಿ ಅವಧಿಯಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರೇ ಪರಿಹಾರ ನೀಡಿರುವುದು. ಸಿಎಂ ಮಂತ್ರಿಗಳು ತಪ್ಪು ಮಾಡಿದಾಗ ಜೈಲಿಗೆ ಕಳುಹಿಸಿದ್ದು ಲೋಕಾಯುಕ್ತ. ಅವರು ಪೂರ್ವಾಗ್ರಹಪೀಡಿತವಾಗಿ ತನಿಖೆ ನಡೆಸಿಲ್ಲ. ವಾಸ್ತವ ಸ್ಥಿತಿಯನ್ನು ತನಿಖೆ ಮಾಡಿ ವರದಿ ನೀಡಿದ್ದಾರೆ" ಎಂದರು.
"ನಗರದಲ್ಲಿ ಯುಜಿಡಿ ಕೆಲಸಗಳಿಗೆ 750 ಕೋಟಿ ರೂ ಡಿಪಿಆರ್ ಮತ್ತು ಎರಡು ಕೆರೆಗಳ ಪುನರ್ ನಿರ್ಮಾಣ ಕಾರ್ಯಕ್ಕೆ 100 ಕೋಟಿ ರೂ, ದೇವರಾಜ ಮಾರುಕಟ್ಟೆ, ಲಾನ್ಸ್ ಡೌನ್ ಬಿಲ್ಡಿಂಗ್ ಒಡೆದು ಹೊಸದಾಗಿ ನಿರ್ಮಾಣ ಮಾಡಲು 100 ಕೋಟಿ, ನಗರದಲ್ಲಿ 55 ಕಿ.ಮೀ ವೈಟ್ ಟಾಪಿಂಗ್ ಕೆಲಸ ಹಾಗೂ ರಿಂಗ್ ರಸ್ತೆಗೆ ಡಿಪಿಆರ್ ಆಗಬೇಕಿದೆ. ಈ ಬಗ್ಗೆ ಪಾಲಿಕೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ" ಎಂದು ಸಚಿವ ಬೈರತಿ ಸುರೇಶ್ ಹೇಳಿದರು.
ಇದನ್ನೂ ಓದಿ:ಮುಡಾದಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್: ಬಿಜೆಪಿ ನಾಯಕರು ಹೇಳಿದ್ದಿಷ್ಟು
ಇದನ್ನೂ ಓದಿ:ಮುಡಾ: ಸಿಎಂ ಸೇರಿ ನಾಲ್ವರ ವಿರುದ್ಧ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿದ ಲೋಕಾಯುಕ್ತ