ಕರ್ನಾಟಕ

karnataka

ತುಮಕೂರಿನ ವಸಂತನರಸಾಪುರ ಬಳಿ 'ಇಂಟಿಗ್ರೇಟೆಡ್ ಟೌನ್​ಶಿಪ್​' ನಿರ್ಮಾಣಕ್ಕೆ ಸಚಿವ ಬೈರತಿ ಸುರೇಶ್ ಸೂಚನೆ - Minister Byrathi Suresh

By ETV Bharat Karnataka Team

Published : Jun 12, 2024, 6:12 PM IST

ತುಮಕೂರಿನ ವಸಂತನರಸಾಪುರದ ಬಳಿ ಇಂಟಿಗ್ರೇಟೆಡ್ ಟೌನ್​ಶಿಪ್ ನಿರ್ಮಾಣಕ್ಕೆ ಸಚಿವ ಬೈರತಿ ಸುರೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Minister Byrathi Suresh
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಬೈರತಿ ಸುರೇಶ್ (ETV Bharat)

ಬೆಂಗಳೂರು:ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಇಂಟಿಗ್ರೇಟೆಡ್ ಟೌನ್​ಶಿಪ್ (Integrated Township) ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ (ಬೈರತಿ) ಅವರು ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ನಗರಾಭಿವೃದ್ದಿ ಇಲಾಖೆಯ ಅಡಿಯಲ್ಲಿ ಬರುವ ಹತ್ತು ಮಹಾನಗರ ಪಾಲಿಕೆಗಳು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ, ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಳೆದ 3 ತಿಂಗಳಿನಿಂದ ಇವುಗಳಲ್ಲಿ ನಡೆದಿರುವ ಕಾಮಗಾರಿಗಳು ಹಾಗೂ ಕೈಗೊಂಡಿರುವ ಯೋಜನೆಗಳ ಕುರಿತಂತೆ ಚರ್ಚೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಮಂಡಿಸಿರುವ ಆಯವ್ಯಯದಲ್ಲಿ ವಸಂತನರಸಾಪುರದ ಬಳಿ ಸುಮಾರು 500 ಎಕರೆ ಪ್ರದೇಶದಲ್ಲಿ ಇಂಟಿಗ್ರೇಟೆಡ್ ಟೌನ್​ಶಿಪ್ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಲೋಕಸಭಾ ಚುನಾವಣೆಗಳಿಂದಾಗಿ ಇಲ್ಲಿಯವರೆಗೂ ನೀತಿ ಸಂಹಿತೆ ಜಾರಿಯಲ್ಲಿತ್ತು. ಈಗ ಅದು ಮುಕ್ತಾಯವಾಗಿರುವುದರಿಂದ ಟೌನ್‌ಶಿಪ್ ನಿರ್ಮಾಣದ ಬಗ್ಗೆ ಗಮನ ಹರಿಸುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಹಾಸನ, ಚಿಕ್ಕಮಗಳೂರು, ಬೆಳಗಾವಿ ಮತ್ತು ಕೋಲಾರ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ರಸ್ತೆಗೆ ಡಾಂಬರೀಕರಣ, ರಸ್ತೆ ನಿರ್ಮಾಣ ಹಾಗೂ ರಿಂಗ್ ರಸ್ತೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದರು. ಅಲ್ಲದೆ ಮೈಸೂರು ರಿಂಗ್ ರಸ್ತೆ ನಿರ್ಮಾಣ ಮಾಡಲು ಕೆಲ ಅಡೆತಡೆಗಳು ಎದುರಾಗಿದ್ದು, ಮತ್ತೆ ಅಲ್ಪಕಾಲೀನ ಮರು ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವಂತೆಯೇ ಇತರೆ ಮಹಾನಗರ ಪಾಲಿಕೆಗಳಲ್ಲಿಯೂ ಕಾರ್ಪೋರೇಶನ್ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದ್ದು, ಎಲ್ಲೆಲ್ಲಿ ತೆರೆಯಲು ಸಾಧ್ಯವಿದೆ ಎನ್ನುವುದನ್ನು ಪರಿಶೀಲಿಸಿ. ಅಲ್ಲದೇ, ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಪೋರೇಶನ್ ಶಾಲೆಗಳನ್ನು ತೆರೆಯಲು ಸಾಧ್ಯವೇ? ಎನ್ನುವುದನ್ನು ಪರಿಶೀಲಿಸಿ ತಿಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮಹಾನಗರ ಪಾಲಿಕೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ವೇಳೆ ಹೆಚ್ಚು ಇದ್ದರೆ, ಕಡಿಮೆ ಮಾನವ ಸಂಪನ್ಮೂಲ ಇರುವ ಜಾಗಕ್ಕೆ ನಿಯೋಜನೆ ಮಾಡಲು ಸಾಧ್ಯವೇ? ಎನ್ನುವುದನ್ನು ತಿಳಿಸಲು ಸಚಿವರು ಕಾರ್ಯದರ್ಶಿಗಳಿಗೆ ಕೇಳಿದರು.

ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು ಸೇರಿದಂತೆ ತಾಂತ್ರಿಕ ಸಿಬ್ಬಂದಿಯನ್ನು ಎರವಲು ಸೇವೆ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಬಾಕಿ ಉಳಿದಿರುವ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸಚಿವರು ಸಭೆಯಲ್ಲಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಮೃತ್ 2.0 ಯೋಜನೆಯಡಿಯಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ತಗಲುವ ವೆಚ್ಚ ಕುರಿತಂತೆ ಕ್ರಿಯಾಯೋಜನೆ ರೂಪಿಸಲು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸಚಿವ ಬೈರತಿ ಸುರೇಶ್ ಸೂಚಿಸಿದರು.

ಇದನ್ನೂ ಓದಿ:ಇಂಟಿಗ್ರೇಟೆಡ್ ಟೌನ್​ಷಿಪ್ ಯೋಜನೆ: ಪರಿಣತ ವಿವಿಗಳ ಸಹಯೋಗ ಪಡೆಯಲು ಸಿಎಂ ಸೂಚನೆ

ABOUT THE AUTHOR

...view details