ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣ ಸಂಬಂಧಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ಸಂಜೆ ರಾಜೀನಾಮೆ ಪತ್ರ ಸಲ್ಲಿಸಿದರು. ಕಾವೇರಿ ನಿವಾಸಕ್ಕೆ ತೆರಳಿ ಸಿಎಂ ಅವರನ್ನು ಭೇಟಿಯಾಗಿ, ನಾನು ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಉಲ್ಲೇಖಿಸಿ ಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಇದ್ದರು.
ಇದಕ್ಕೂ ಮುನ್ನ ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಾಗೇಂದ್ರ, "ಅಕ್ರಮದ ಸಂಬಂಧ ವಿಪಕ್ಷದವರು ಕಾಂಗ್ರೆಸ್ ಮೇಲೆ ಕೆಸರೆರಚಾಟ ಮಾಡುತ್ತಿದ್ದಾರೆ. ನಾನು ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇನೆ. ಆತ್ಮಸಾಕ್ಷಿಯಿಂದ ಯಾರದ್ದೂ ಒತ್ತಡ ಇಲ್ಲದೆ ರಾಜೀನಾಮೆ ಪಡೆಯುತ್ತಿದ್ದೇನೆ. ಸಿಎಂ ಜೊತೆ ಚರ್ಚಿಸಿದಾಗ ನನ್ನ ಮೇಲೆ ಯಾವುದೇ ಒತ್ತಡ ಹಾಕಿಲ್ಲ" ಎಂದು ಹೇಳಿದ್ದರು.
"ಯಾರಿಗೂ ಕೂಡ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಸಿಎಂ ಅದ್ಬುತವಾಗಿ ಆಡಳಿತ ನಡೆಸುತ್ತಿದ್ದಾರೆ. ಈ ವೇಳೆ ಯಾವುದೇ ಸಮಸ್ಯೆ ಆಗಬಾರದು ಎಂದು ರಾಜೀನಾಮೆ ನೀಡುತ್ತಿದ್ದೇನೆ. ಪ್ರಕರಣ ಸಂಬಂಧ ಎಸ್ಐಟಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯುವಾಗ ನಾನು ಮಂತ್ರಿ ಸ್ಥಾನದಲ್ಲಿದ್ದರೆ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ಹುದ್ದೆ ತೊರೆಯುತ್ತಿದ್ದೇನೆ. ಸತ್ಯಾಂಶ ಹೊರಬಂದ ಬಳಿಕ ಮತ್ತೆ ಸಚಿವನಾಗುತ್ತೇನೆ" ಎಂದು ತಿಳಿಸಿದರು.