ಕರ್ನಾಟಕ

karnataka

ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ: 2 ದಿನ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ - Rain Alert In Coastal And Malnad

By ETV Bharat Karnataka Team

Published : Jul 27, 2024, 4:50 PM IST

ರಾಜ್ಯದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಹವಾಮಾನ ಇಲಾಖೆಯು ಅಲರ್ಟ್​ ಘೋಷಣೆ ಮಾಡಿದೆ.

rain alert
ಮಳೆ (ETV Bharat)

ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದ್ದು, ಮುಖ್ಯವಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭರ್ಜರಿ ವರ್ಷಧಾರೆಯಾಗುತ್ತಿದೆ. ಮುಂದಿನ 48 ಗಂಟೆಗಳಿಗೆ ಅನ್ವಯಿಸುವಂತೆ ಹವಾಮಾನ ಇಲಾಖೆ ಅಲ್ಲಿನ ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದೆ.

ಉಡುಪಿ ಜಿಲ್ಲೆಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್, ದಕ್ಷಿಣ ಕನ್ನಡಕ್ಕೆ ಆರೆಂಜ್ ಮತ್ತು ಯೆಲ್ಲೋ, ಉತ್ತರ ಕನ್ನಡ ಜಿಲ್ಲೆಗೆ ಮುಂದಿನ 48 ಗಂಟೆಗಳ ಕಾಲ ಆರೆಂಜ್ ಅಲರ್ಟ್ ನೀಡಲಾಗಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗಕ್ಕೆ ಇಂದು ಯೆಲ್ಲೋ ಮತ್ತು ನಾಳೆ ಆರೆಂಜ್ ಅಲರ್ಟ್, ಕೊಡಗುಗೆ ಇಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗೆ ಎರಡು ದಿನ ಯೆಲ್ಲೋ ಮತ್ತು ಕಲಬುರಗಿ ಮತ್ತು ಬೀದರ್​ಗೆ ಇಂದು ಯೆಲ್ಲೋ ಅಲರ್ಟ್ ಇದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಅಲ್ಲಿನ ಪ್ರದೇಶದಲ್ಲಿ ನಿರಂತರ ಗಾಳಿಯ ವೇಗವು ಪ್ರತಿ ಗಂಟೆಗೆ 40ರಿಂದ 50 ಕಿ.ಮೀ. ತಲುಪುವ ಸಾಧ್ಯತೆಯಿದೆ. ಉಡುಪಿ, ಬೆಳಗಾವಿ, ಬೀದರ್, ಕಲಬುರಗಿ ಮತ್ತು ಕೊಡಗು ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಉಳಿದಂತೆ, ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸಿಲಿಕಾನ್ ಸಿಟಿಯಲ್ಲಿ ನಿರಂತರ ಗಾಳಿ, ಹಗುರ ಮಳೆ:ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರ ಮಳೆಯಾಗುವ ಸಾಧ್ಯತೆಯಿದ್ದು, ನಿರಂತರ ಗಾಳಿ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿಗ್ರಿ ಮತ್ತು 20 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ.

ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ:ನಿನ್ನೆಯಿಂದ ರಾಜ್ಯದಲ್ಲಿ ಅತಿ ಹೆಚ್ಚು 16 ಸೆಂ.ಮೀ. ಮಳೆಯು ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ದಾಖಲಾಗಿದೆ. ಕೊಡಗಿನ ಸೋಮವಾರಪೇಟೆಯಲ್ಲಿ 15 ಸೆಂ.ಮೀ., ಉತ್ತರ ಕನ್ನಡದ ಕ್ಯಾಸಲ್ ರಾಕ್ ಮತ್ತು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 14 ಸೆಂ.ಮೀ. ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

''ಸರಾಸರಿ ಸಮುದ್ರ ಮಟ್ಟದಲ್ಲಿರುವ ಆಫ್ - ಶೋರ್ ಟ್ರಫ್ ಈಗ ದಕ್ಷಿಣ ಗುಜರಾತ್​ನಿಂದ ಉತ್ತರ ಕರ್ನಾಟಕ ಕರಾವಳಿಯವರೆಗೆ ಹಾದು ಹೋಗುತ್ತಿದೆ. ಆದ್ದರಿಂದ ಕರಾವಳಿ ಕರ್ನಾಟಕ ಮತ್ತು ಪಕ್ಕದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಬಲವಾದ ಗಾಳಿ ಒಮ್ಮುಖವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕಾಗಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಮತ್ತು ಉತ್ತರ ಒಳನಾಡಿನ ಹಲವೆಡೆ ಮಳೆಯಾಗುತ್ತಿದೆ'' ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ತಿಳಿಸಿದ್ದಾರೆ.

ಇದನ್ನೂ ಓದಿ:ಸತತ ಮಳೆಯಿಂದ ಕೋಡಿ ಬಿದ್ದ ಮದಗದ ಕೆರೆ: ರೈತರ ಮೊಗದಲ್ಲಿ ಮಂದಹಾಸ - Madagadakere Lake

ABOUT THE AUTHOR

...view details