ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಕ್ವಿನ್ ಸಿಟಿ' ಯೋಜನೆಗೆ ಅತ್ಯುತ್ಕೃಷ್ಟ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಪ್ರಮುಖ ದುಂಡು ಮೇಜಿನ ಸಭೆ ನಡೆಯಿತು.
ಸಚಿವರುಗಳ ಜೊತೆ ಅಪೋಲೋ ಆಸ್ಪತ್ರೆಗಳ ಸಮೂಹದ ರಾಜ್ಯ ಸಿಇಒ ಮನೀಶ್ ಮಟ್ಟೂ, ಕಾನ್ಸೆಪೋ ಸೈನ್-ಟೆಕ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಹಿರೇಮಠ ಮತ್ತು ಎಜಿಎಂ ಕುಂದಣ್ ಕುಮಾರ್, ಮಣಿಪಾಲ್ ಹಾಸ್ಪಿಟಲ್ಸ್ ನಿರ್ದೇಶಕ ಆರ್ಣಬ್ ಮಂಡಲ್, ನಿಯೋವಾಂಟೇಜ್ ಇನ್ನೋವೇಶನ್ ಪಾರ್ಕ್ ಸಿಇಒ ಮೋನಿಶಾ ಝಾ, ನೋವೋನಿಸಿಸ್ ಉನ್ನತಾಧಿಕಾರಿ ಸೌಮ್ಯಾ ಶ್ರೇಷ್ಠ, ಪ್ಯಾರಾಕ್ಸೆಲ್ ಮುಖ್ಯಸ್ಥ ಸಂಜಯ್ ವ್ಯಾಸ್, ಸ್ಟ್ರಿಂಗ್ ಬಯೋ ಸಿಇಒ ಡಾ. ಎಳಿತ್ ಸುಬ್ಬಯ್ಯನ್, ಸ್ಪರ್ಶ್ ಆಸ್ಪತ್ರೆಯ ಸ್ಥಾಪಕ ಡಾ. ಶರಣ್ ಪಾಟೀಲ್ ಮುಂತಾದವರು ಕ್ವಿನ್ ಸಿಟಿಯಲ್ಲಿ ಇರುವ ಅವಕಾಶಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.
ಇದಲ್ಲದೆ ಎಂ.ಎಸ್. ರಾಮಯ್ಯ ಆಸ್ಪತ್ರೆ, ಸಂತೋಷ್ ಹಾಸ್ಟಿಟಲ್ಸ್, ಟಿಐಇ, ಮಾರ್ಕ್, ಭೂಮಿಪುತ್ರ ಆಸ್ಪತ್ರೆ, ಶಿಲ್ಪಾ ಬಯಲಾಜಿಕಲ್ಸ್, ಜಿ.ಇ ಹೆಲ್ತ್ ಕೇರ್ ಕಂಪನಿಗಳ ಹಾಗೂ ನಾರ್ವೆ ಮತ್ತು ಸ್ಲೊವೇನಿಯಾ ರಾಷ್ಟ್ರಗಳ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕ್ವಿನ್ ಸಿಟಿಯ ಪರಿಕಲ್ಪನೆ ಮತ್ತು ಇಲ್ಲಿ ಆರೋಗ್ಯಸೇವೆಗಳಿಗೆ ಸರ್ಕಾರವು ನೀಡಿರುವ ಆದ್ಯತೆಯನ್ನು ಮನವರಿಕೆ ಮಾಡಿಕೊಟ್ಟು, ಹೂಡಿಕೆ ಮಾಡುವಂತೆ ಕೋರಿದರು. ಇದೊಂದು ಹೊಸ ಕಲ್ಪನೆ ಆಗಿದ್ದು, ಇದಕ್ಕೆ ಸರ್ಕಾರದ ಕಡೆಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವರು ಅಭಯ ನೀಡಿದರು.
ಕ್ವಿನ್ ಸಿಟಿ ವಿಶ್ವದರ್ಜೆಯ ಮಟ್ಟದ್ದು-ಶರಣಪ್ರಕಾಶ್ ಪಾಟೀಲ್ : ''ರಾಜಧಾನಿ ಬೆಂಗಳೂರಿನಲ್ಲಿ ತಲೆ ಎತ್ತುತ್ತಿರುವ ಕ್ವಿನ್ ಸಿಟಿ ವಿಶ್ವದರ್ಜೆಯ ಮಟ್ಟದ್ದಾಗಿದ್ದು, ಇಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ. ಇದರಿಂದ ಜನರಿಗೆ ಉತ್ತಮ ಸೇವೆ ಸಿಗುವುದಲ್ಲದೇ, ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ'' ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
"ಕ್ವಿನ್ ಸಿಟಿ ಹಾಗೂ ಆರೋಗ್ಯ ರಕ್ಷಣೆ ಕ್ಷೇತ್ರದ" ಚರ್ಚಾಗೋಷ್ಠಿಯಲ್ಲಿ ಇಂದು ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಸಮೀಪದಲ್ಲಿ 5,800 ಎಕರೆಗಳಲ್ಲಿ ಮೈದಳೆಯುತ್ತಿರುವ ಕ್ವಿನ್ ಸಿಟಿ, ವೈದ್ಯಕೀಯ ಕ್ಷೇತ್ರದ ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಲಿದೆ. ಔಷಧಗಳು, ರೋಗನಿರ್ಣಯಗಳು ಮತ್ತು ವೈದ್ಯಕೀಯ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹೂಡಿಕೆಯನ್ನು ಆಕರ್ಷಿಸಲಿದೆ. ಇದರಿಂದ ರಾಜ್ಯದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ'' ಎಂದು ಸಚಿವರು ತಿಳಿಸಿದರು.