ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳಿಗೆ ವಿಶೇಷಚೇತನ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಇಂದಿನಿಂದ ಆರಂಭವಾಗಿದೆ. ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ನಡೆಯುತ್ತಿರುವ ವೈದ್ಯಕೀಯ ತಪಾಸಣೆಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಚಾಲನೆ ನೀಡಿದರು.
ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯಿಂದ ಬಂದಿದ್ದ ಆರು ಮಂದಿ ಮೂಳೆ ರೋಗ ಮತ್ತು ಕಣ್ಣು, ಮೂಗು, ಕಿವಿ (ಇಎನ್ಟಿ) ತಜ್ಞ ವೈದ್ಯರು, ಅಭ್ಯರ್ಥಿಗಳನ್ನು ತಪಾಸಣೆ ಮಾಡಿ, ದಾಖಲೆಗಳನ್ನು ಪರಿಶೀಲಿಸಿದರು. ಇದನ್ನು ಖುದ್ದು ಪ್ರಸನ್ನ ಅವರು ಮೇಲ್ವಿಚಾರಣೆ ನಡೆಸಿದರು.
ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಅವರು, "ಸಿಇಟಿಗೆ ಅರ್ಜಿ ಸಲ್ಲಿಸುವಾಗ ಒಟ್ಟು 783 ಮಂದಿ ವಿಶೇಷಚೇತನರ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿದ್ದು, ಅಷ್ಟೂ ಮಂದಿಗೆ ಜೂ.12ರ ವರೆಗೆ ತಪಾಸಣೆ ನಡೆಸಲಾಗುತ್ತದೆ. ಮೊದಲ ದಿನ 250 ಮಂದಿಗೆ ಬರಲು ಸೂಚಿಸಲಾಗಿದೆ" ಎಂದು ತಿಳಿಸಿದರು.