ಚಾಮರಾಜನಗರ: ಅಯೋಧ್ಯೆ ರಾಮ ಮಂದಿರದಲ್ಲಿ ಸೋಮವಾರ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ವಿಶೇಷ ಸಭೆ ನಡೆಸಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸುವ ಬಗ್ಗೆ ತೀರ್ಮಾನಿಸಿದ್ದಾರೆ. ಅಂತೆಯೇ ಈ ಬಗ್ಗೆ ಪಿಡಿಓ ಅವರು ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ತೆರಕಣಾಂಬಿ ಗ್ರಾಪಂ ವ್ಯಾಪ್ತಿಯಲ್ಲಿ ಜನವರಿ 20 ರಿಂದ 22 ರವರೆಗೆ ಎಲ್ಲ ಮಾಂಸದ ಅಂಗಡಿಗಳು ಮತ್ತು ಹೋಟೆಲ್ಗಳಲ್ಲಿ ಮಾಂಸ ಮಾರಾಟ ನಿಷೇಧಿಸಿ ಗ್ರಾಪಂ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಮೂರು ದಿನಗಳವರೆಗೆ ಮಾಂಸ ಮಾರಾಟ ಸ್ಥಗಿತಗೊಳಿಸಬೇಕು ಎಂದು ಮಾಂಸಾಹಾರ ಹೋಟೆಲ್ ಸೇರಿದಂತೆ ಮಾಂಸ ಮಾರಾಟ ಮಳಿಗೆಗಳಿಗೂ ನೊಟೀಸ್ ನೀಡಲಾಗಿದೆ. ಒಂದು ವೇಳೆ ಮಾಂಸ ಮಾರಾಟ ಕಂಡುಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೊಟೀಸ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಶಬರಿ ನೋಡಲು ಓಡೋಡಿ ಬಂದಿದ್ದ ಶ್ರೀರಾಮ: ಸುರೇಬಾನದಲ್ಲಿನ ಶಬರಿಕೊಳ್ಳದ ವಿಶೇಷತೆ ಏನು?
ಪ್ರಾಣ ಪ್ರತಿಷ್ಠಾಪನೆ ಸಕಲ ಸಿದ್ಧತೆ:ಅಯೋಧ್ಯೆ ರಾಮ ಮಂದಿರದಲ್ಲಿ ಸೋಮವಾರ (ಜ.22) ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇನ್ನು ಗುರುವಾರವಷ್ಟೇ ದೇವಾಲಯದ ಗರ್ಭಗುಡಿಯಲ್ಲಿ ಬಾಲ ಶ್ರೀರಾಮನ ವಿಗ್ರಹ ತಂದು ನಿಲ್ಲಿಸಲಾಯಿತು. ರಾಮಲಲ್ಲಾ ವಿಗ್ರಹವನ್ನು ಮೈಸೂರು ಮೂಲದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಈ ವಿಗ್ರಹ 51 ಇಂಚು ಎತ್ತರ ಮತ್ತು ಅಂದಾಜು 1.5 ಟನ್ ತೂಕವಿದೆ. ಕಮಲದ ಮೇಲೆ ಐದು ವರ್ಷದ ಮಗು ನಿಂತಿರುವಂತೆ ಕಲ್ಲಿನಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ.