ಕರ್ನಾಟಕ

karnataka

ಜಿಂದಾಲ್‌ಗೆ ಭೂಮಿ: ಪ್ರತಿಪಕ್ಷಗಳ ಆರೋಪಗಳಿಗೆ ಸಚಿವ ಎಂ‌.ಬಿ.ಪಾಟೀಲ್ ಸ್ಪಷ್ಟನೆ ಹೀಗಿದೆ - Land To Jindal

By ETV Bharat Karnataka Team

Published : Aug 23, 2024, 9:55 PM IST

ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿ ಪರಭಾರೆ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ಹಾಗೂ ವಿರೋಧದ ಬೆನ್ನಲ್ಲೇ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ‌.ಬಿ.ಪಾಟೀಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

MB Patil clarification on land to jindal
ಪ್ರತಿಪಕ್ಷ‌ ಉಪನಾಯಕ ಅರವಿಂದ ಬೆಲ್ಲದ್​ ಮತ್ತು ಸಚಿವ ಎಂ‌.ಬಿ.ಪಾಟೀಲ್ (ETV Bharat)

ಧಾರವಾಡ/ಬೆಂಗಳೂರು:ವಿರೋಧದ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಖಾನೆ ಹೊಂದಿರುವ ಜೆಎಸ್‌ಡಬ್ಲೂ ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿ ಪರಭಾರೆ ಮಾಡುತ್ತಿದೆ ಎಂದು ಪ್ರತಿಪಕ್ಷ‌ ಉಪನಾಯಕ ಅರವಿಂದ ಬೆಲ್ಲದ್​ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ‌ ರಾಜ್ಯ ನೈಸರ್ಗಿಕ ಸಂಪತ್ತು ಹೊಂದಿದೆ. ಇದರಲ್ಲಿ ಬಳ್ಳಾರಿಯ ಸಂಡೂರಿನ ಅದಿರಿಗೆ ಜಗತ್ತಿನಲ್ಲಿ ಹೆಚ್ಚು ಬೇಡಿಕೆ ಇದೆ. ಸಂಡೂರು ಭಾಗದ ಮಣ್ಣು ಬಂಗಾರದ ಬೆಲೆ ಬಾಳುತ್ತದೆ. ಪ್ರತಿ ಎಕರೆಗೆ ಕೋಟ್ಯಂತರ ರೂಪಾಯಿ ಬೆಲೆ ಇದೆ. ಇಂತಹ ಕೋಟಿ ಕೋಟಿ‌ ಬೆಲೆ ಬಾಳುವ ಭೂಮಿಯನ್ನು ಕಾಂಗ್ರೆಸ್ ಸರ್ಕಾರ ಜಿಂದಾಲ್​ಗೆ ನೀಡಲು ಮುಂದಾಗಿದೆ. 3,667 ಎಕರೆ ಜಮೀನು ಪರಭಾರೆ ಮಾಡಲು ಮುಂದಾಗಿದೆ ಎಂದು ದೂರಿದರು.

ಪ್ರತಿ ಎಕರೆಗೆ 1 ಲಕ್ಷ 20 ಸಾವಿರ ರೂ. ಬೆಲೆಗೆ 2,000 ಎಕರೆ ಜಮೀನು ನೀಡುತ್ತಿದ್ದಾರೆ. 1 ಲಕ್ಷ 50 ಸಾವಿರದಂತೆ 1,667 ಎಕರೆ ಜಮೀನು ನೀಡುಲು ಕ್ಯಾಬಿನೆಟ್​ನಲ್ಲಿ‌ ನಿರ್ಧರಿಸಲಾಗಿದೆ. ಈ ಮುನ್ನ ಕೂಡ ಇದೇ ನಿರ್ಧಾರವನ್ನು ಸಿದ್ದರಾಮಯ್ಯ ತೆಗೆದುಕೊಂಡದ್ದರು. ಆಗ ಅಧಿವೇಶನದಲ್ಲಿ ಹಗಲುರಾತ್ರಿ ವಿಧಾನಸಭೆಯಲ್ಲಿ ಮಲಗಿ ಹೋರಾಟ ಮಾಡಿದ್ದೆವು. ನಮ್ಮ ಹೋರಾಟಕ್ಕೆ‌ ಮಣಿದು ಇದನ್ನು ಕೈಬಿಟ್ಟಿದ್ದರು. ಈ ವಿಚಾರವಾಗಿ ಸರ್ಕಾರ ಕೋರ್ಟ್​ಗೆ ಮುಚ್ಚಳಿಕೆ ಬರೆದು‌ ಕೊಟ್ಟಿದ್ದರು. ಈಗ ಸರ್ಕಾರ ಮತ್ತೆ ಭೂಮಿ ನೀಡುಲು ಮುಂದಾಗಿದೆ. ಈ ಸರ್ಕಾರ ತೆಗೆದುಕೊಂಡ ನಿರ್ಧಾರ ತಪ್ಪು. ಭ್ರಷ್ಟ ಸರ್ಕಾರಕ್ಕೆ ನಾಚಿಕೆ ಆಗಬೇಕು. ಭ್ರಷ್ಟಾಚಾರದ ಹಗರಣಗಳಿಗೆ ಹೆದರದ ಸರ್ಕಾರ ಇದಾಗಿದೆ. ಜಿಂದಾಲ್​ಗೆ ಸರ್ಕಾರ ಭೂಮಿ‌ ಕೊಡುವುದನ್ನು ನಾವು ವಿರೋಧ ಮಾಡಿದ್ದೇವೆ. ಕೋರ್ಟ್ ಮುಖಾಂತರ ರೈತರೊಂದಿಗೆ ಹಾಗೂ ರಾಜ್ಯದ ಜನತೆಯೊಂದಿಗೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದರು.

ಇದೇ ವೇಳೆ ಸಿಎಂ ಆ.29ಕ್ಕೆ ಕೋರ್ಟ್‌ ವಿಚಾರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೆಲ್ಲದ್​, ಕೋರ್ಟ್ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲಿದೆ. ಬಳಿಕ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಹೋಗಲಿದೆ. ಅದಕ್ಕೆ ಆದಷ್ಟು ದುಡ್ಡು ಮಾಡಿಕೊಂಡು ಹೋಗೋಣ ಎಂಬ ಪ್ಲ್ಯಾನ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕಾನೂನಿನ ಪ್ರಕಾರವೇ ಜಿಂದಾಲ್​ಗೆ ಜಮೀನು: ಜಿಂದಾಲ್ ಉಕ್ಕು ಕಂಪನಿಗೆ ಕೋರ್ಟ್ ನಿರ್ದೇಶನ ಮತ್ತು ಅದನ್ನು ಅನುಸರಿಸಿ ಹೊರಡಿಸಿದ ಸರ್ಕಾರಿ ಆದೇಶ ಹಾಗೂ ಸಂಪುಟ ಸಭೆಯ ನಿರ್ಣಯದಂತೆಯೇ ಕಾನೂನಿಗೆ ಅನುಸಾರವಾಗಿ 3,677 ಎಕರೆ ಭೂಮಿಯನ್ನು ಗುತ್ತಿಗೆ ಮಾರಾಟ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರದ್ದು ಎಳ್ಳಷ್ಟೂ ತಪ್ಪಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ‌.ಬಿ.ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.

ಪ್ರತಿಪಕ್ಷಗಳ ಆರೋಪ ಹಾಗೂ ವಿರೋಧದ ಬೆನ್ನಲ್ಲೇ ಇಂದು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಖಾನೆ ಹೊಂದಿರುವ ಜಿಂದಾಲ್ ಕಂಪನಿಗೆ ನಾವೇನೂ ರಿಯಾಯಿತಿ ಕೊಟ್ಟಿಲ್ಲ. ಮಾರುಕಟ್ಟೆ ಬೆಲೆ ಹಿಂದೆ ಏನಿದೆಯೋ ಅದನ್ನು ನಿಗದಿಪಡಿಸಿದ್ದೇವೆ. ಕಂಪನಿ ಕೂಡ ಸರ್ಕಾರದ ಷರತ್ತುಗಳನ್ನು ಪಾಲಿಸಿದೆ. ರಾಜ್ಯದಲ್ಲಿರುವ ಒಂದು ಲಕ್ಷ ಕೈಗಾರಿಕೆಗಳಿಗೆ ಯಾವ ನಿಯಮ ಹೇಳಿದ್ದೇವೋ ಅದನ್ನೇ ಜಿಂದಾಲ್​ಗೂ ಹೇಳಿದ್ದೇವೆ. ವಾಸ್ತವವಾಗಿ ಒಂಬತ್ತು ವರ್ಷಗಳ‌ ಕಾಲ ಇದನ್ನು ವೃಥಾ ಎಳೆದಾಡಿದ್ದೇವೆ ಎಂದಿದ್ದಾರೆ.

ಇನ್ನು ಆರು ತಿಂಗಳಲ್ಲಿ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಜಿಂದಾಲ್ ರಾಜ್ಯದಲ್ಲಿ 90 ಸಾವಿರ ಕೋಟಿ ರೂಪಾಯಿ ಹೂಡಿದ್ದು, 50 ಸಾವಿರ ಉದ್ಯೋಗ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ಹೂಡಿಕೆದಾರರಿಗೆ ತಪ್ಪು ಸಂದೇಶ ಹೋಗಬಾರದು ಎಂದು ಪ್ರತಿಪಾದಿಸಿದ್ದಾರೆ.

ಸರ್ಕಾರ ಉದ್ಯಮಿಗಳಿಗೆ ಜಮೀನು ಕೊಡುತ್ತದೆ. ಅದರಲ್ಲಿ ಹತ್ತು ವರ್ಷಗಳಲ್ಲಿ ಶೇ. 51ರಷ್ಟು ಭೂಮಿಯನ್ನು ಅವರು ಬಳಸಿಕೊಂಡು, ಕಂಪನಿಯನ್ನು ಸಕ್ರಿಯವಾಗಿ ಇಟ್ಟಿರಬೇಕು. ಆಗ ಕೈಗಾರಿಕಾ ನೀತಿಯಂತೆ ಗುತ್ತಿಗೆ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಜಿಂದಾಲ್ ಎಲ್ಲೂ ಎಡವಿಲ್ಲ ಎಂದು ನುಡಿದರು.

ನಾವು ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿಂದ ಕೈಗಾರಿಕಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಎದುರಿಸುತ್ತಿದ್ದೇವೆ. ಎಷ್ಟೋ ರಾಜ್ಯಗಳು ಉದ್ದಿಮೆಗಳಿಗೆ ಉಚಿತವಾಗಿ ಭೂಮಿ ಕೊಡುತ್ತಿವೆ. ಹಿಂದೆ ಜಿಂದಾಲ್ ಕಂಪನಿಗೆ ಭೂಮಿಯನ್ನು ಲೀಸ್ ಕಂ ಸೇಲ್ ಮಾಡಲು ಕೆಲವರು ಯಾಕೆ ವಿರೋಧಿಸಿದರೋ ಗೊತ್ತಿಲ್ಲ. ಹಿಂದೆ ನಾವು ಜಿಂದಾಲ್ ವಿರುದ್ಧವೇನೂ ಪ್ರತಿಭಟಿಸಿಲ್ಲ. ಆಗ ನಾವು ಜನಾರ್ದನ ರೆಡ್ಡಿ ವಿರುದ್ಧವಷ್ಟೇ ದನಿ ಎತ್ತಿದ್ದೆವು. ಈಗ ಜಿಂದಾಲ್​ಗೆ ಕೊಡುತ್ತಿರುವ ಭೂಮಿಯಲ್ಲಿ ಗಣಿಗಾರಿಕೆಯೇನೂ ನಡೆಯುತ್ತಿರಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಕೆಐಎಡಿಬಿ ಸಿಎ ನಿವೇಶನ ಹರಾಜು ಮಾಡುವ ಪದ್ಧತಿ ಇಲ್ಲ, ಕಾನೂನು ಪ್ರಕಾರ ಹಂಚಿಕೆ:ಎಂ.ಬಿ.ಪಾಟೀಲ್ - Minister M B Patil

ABOUT THE AUTHOR

...view details