ತುಮಕೂರು: ಜಿಲ್ಲೆಯಲ್ಲಿ ಈ ವರ್ಷದ ಏಪ್ರಿಲ್ನಿಂದ ನವೆಂಬರ್ವರೆಗೆ 16 ತಾಯಿ ಮರಣ ಹಾಗೂ 196 ಶಿಶುಗಳ ಮರಣ ಸಂಭವಿಸಿದ್ದು, ಇದನ್ನು ಶೂನ್ಯಕ್ಕಿಳಿಸಲು ಜಿಲ್ಲಾ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ಅಂಕಿ-ಅಂಶಗಳ ಪ್ರಕಾರ, 2024ರ ಏಪ್ರಿಲ್ನಿಂದ ನವೆಂಬರ್ವರೆಗೆ 19,583 ಹೆರಿಗೆ ಪ್ರಕರಣಗಳು ವರದಿಯಾಗಿವೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿದರು. (ETV Bharat) ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡಬೇಕು. ಸಹಜ ಹೆರಿಗೆ ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮಾತ್ರ ಸಿ-ಸೆಕ್ಷನ್(ಸಿಸೇರಿಯನ್) ಹೆರಿಗೆ ಮಾಡಬೇಕು. ಹೆರಿಗೆ ಮಾಡುವ ವೈದ್ಯರು ಹಾಗೂ ಹೆರಿಗೆಗೆ ಸಹಕರಿಸುವ ಶುಶ್ರೂಷಕರಿಗೆ ನೈಪುಣ್ಯತೆ ತರಬೇತಿ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಮರಣ ಹೊಂದಿದ 16 ತಾಯಂದಿರ ಪೈಕಿ ಮನೆಯಲ್ಲಿ 1, ಖಾಸಗಿ ಆಸ್ಪತ್ರೆಯಲ್ಲಿ 8, ಸರ್ಕಾರಿ ಆಸ್ಪತ್ರೆಯಲ್ಲಿ 3 ಹಾಗೂ ಮಾರ್ಗಮಧ್ಯೆ 4 ಪ್ರಕರಣಗಳು ವರದಿಯಾಗಿವೆ. ಅದೇ ರೀತಿ, ಆಸ್ಪತ್ರೆಯಲ್ಲಿ 127 ಹಾಗೂ ಮನೆಯಲ್ಲಿ 69 ಸೇರಿ ಒಟ್ಟು 196 ಶಿಶುಗಳ ಮರಣ ಸಂಭವಿಸಿದೆ.
ಏಪ್ರಿಲ್ ತಿಂಗಳಿನಿಂದ ನವೆಂಬರ್ವರೆಗೆ ಹೃದಯ ಸಂಬಂಧಿತ, ಅಧಿಕ ರಕ್ತದೊತ್ತಡ, ಅಧಿಕ ರಕ್ತಸ್ರಾವ, ಉಸಿರಾಟದ ತೊಂದರೆ, ಅವಧಿ ಪೂರ್ವ ಹೆರಿಗೆ, ಡಯೇರಿಯಾ, ಆಸ್ಫಿಕ್ಸಿಯಾ, ಕಡಿಮೆ ತೂಕದ ಜನನ, ನಿಮೋನಿಯಾ, ಸೆಪ್ಸಿಸ್ ಸೇರಿದಂತೆ ಮತ್ತಿತರ ರೋಗಗಳಿಂದ ತಾಯಿ ಮತ್ತು ಶಿಶು ಮರಣ ಸಂಭವಿಸಿವೆ.
ಈ ಕುರಿತು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, "ಗರ್ಭಿಣಿಯರಿಗೆ ತಮ್ಮ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಬೇರು ಮಟ್ಟದಲ್ಲಿಯೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅವರಿಗೆ ಅಂಗನವಾಡಿಗಳ ಮೂಲಕ ಕ್ಯಾಲ್ಸಿಯಂ ಮಾತ್ರೆ ಸೇರಿದಂತೆ ಪೌಷ್ಟಿಕಾಂಶಭರಿತ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಮರಣ ಪ್ರಮಾಣ ಕ್ಷೀಣಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳು ಸದ್ದಿಲ್ಲದೆ ಕಾರ್ಯಪ್ರವೃತ್ತರಾಗಿದ್ದಾರೆ" ಎಂದರು.
"ಕಳೆದ ವರ್ಷ ಶೇ.14ರಷ್ಟಿದ್ದ ಮರಣ ಪ್ರಮಾಣ ಈ ವರ್ಷ ಶೇ.12 ರಷ್ಟಕ್ಕೆ ಬಂದಿದೆ. ಸರ್ಕಾರದಿಂದ ಗುಣಮಟ್ಟದ ಕಾರ್ಯಕ್ರಮಗಳು ಬರುತ್ತಿರುವುದರಿಂದ ಪ್ರತಿವರ್ಷವೂ ಜಾಗೃತಿ ಜಾಸ್ತಿಯಾಗುತ್ತಲೇ ಇದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಈ ಬಗ್ಗೆ ತಿಳಿಸುತ್ತಿದ್ದೇವೆ" ಎಂದು ಹೇಳಿದರು.
"ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಪಾವಗಡ ಮತ್ತು ಮಧುಗಿರಿ ತಾಲೂಕಿನಲ್ಲಿ ವಿಶೇಷವಾಗಿ ಮೆಟರ್ನಿಟಿ ಹಾಸ್ಪಿಟಲ್ಗಳನ್ನು ತೆರೆಯಲಾಗಿದೆ. ಅಲ್ಲಿ ಪ್ರತ್ಯೇಕವಾಗಿ ಆರೋಗ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯಡಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಬಾಣಂತಿಯರ ಸಾವು ಪ್ರಕರಣ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ: ಸಚಿವ ದಿನೇಶ್ ಗುಂಡೂರಾವ್ - MATERNAL DEATH CASE