ಚಿಕ್ಕಬಳ್ಳಾಪುರ:ಮದುವೆಯಾಗಿ ವರ್ಷ ತುಂಬುವುದರೊಳಗೇ ನವ ವಿವಾಹಿತೆ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ನಗರದಲ್ಲಿ ಶನಿವಾರ ನಡೆದಿದೆ. ಅತ್ತೆ-ಮಾವ, ಗಂಡ, ಮೈದುನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಿ ಮೃತಪಟ್ಟ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಂದುಶ್ರೀ (22) ಆತ್ಮಹತ್ಯೆ ಮಾಡಿಕೊಂಡವರು. ಗಾಂಧಿನಗರದ ನಿವಾಸಿ ಟೈಲರ್ ವೃತ್ತಿಯ ಕೆ.ಬಿ.ದೇವರಾಜು ಅವರಿಗೆ ಬಿಂದುಶ್ರೀ ಏಕೈಕ ಪುತ್ರಿ. ಇವರನ್ನು ಆವಲಹಳ್ಳಿ ಸಮೀಪದ ಹಿರಂಡಹಳ್ಳಿ ಗ್ರಾಮದ ಮುನಿರಾಜು ಎಂಬವರ ಮಗ ಎಚ್.ಎಂ.ರಾಘವೇಂದ್ರ ಅವರಿಗೆ ಕೊಟ್ಟು 2024ರ ಫೆಬ್ರವರಿ 21ರಂದು ಕೈವಾರದಲ್ಲಿ ಮದುವೆ ಮಾಡಲಾಗಿತ್ತು.
ಬಿಂದುಶ್ರೀ ಪೋಷಕರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, "ಮದುವೆ ವೇಳೆ ಚಿನ್ನದೊಡವೆಗಳನ್ನು ನೀಡಲಾಗಿತ್ತು. ಮದುವೆ ದಿನವೇ ಮಗನಿಗೆ 100 ಗ್ರಾಂ ಒಡವೆ ವರದಕ್ಷಿಣೆಯಾಗಿ ನೀಡಬೇಕೆಂದು ರಾಘವೇಂದ್ರನ ತಾಯಿ ಲತಾ ಗಲಾಟೆ ಮಾಡಿದ್ದರು. ಕೊನೆಗೆ 60 ಗ್ರಾಂ ತೂಕದ ಬ್ರಾಸ್ ಲೈಟ್, ಚೈನು ಹಾಗೂ ಒಂದು ಉಂಗುರ ನೀಡಿದ್ದೆವು. ಮಾವನ ಮನೆಯಲ್ಲಿ ಎರಡು ತಿಂಗಳು ಚೆನ್ನಾಗಿ ನೋಡಿಕೊಂಡಿದ್ದರು. ನಂತರ ನನ್ನ ಮಗಳು ಬಿ.ಕಾಂ. ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲು ನಮ್ಮ ಮನೆಗೆ ಬಂದಳು. ಪರೀಕ್ಷೆ ಮುಗುಸಿ ವಾಪಸ್ ಬರುವಾಗ 20 ಲಕ್ಷ ರೂ. ಹಣ ಹಾಗೂ ಒಂದು ಕಾರನ್ನು ವರದಕ್ಷಿಣೆಯನ್ನಾಗಿ ತೆಗೆದುಕೊಂಡು ಬಾ ಎಂದು ಗಂಡ, ಅತ್ತೆ, ಮಾವ ಎಲ್ಲರೂ ಸೇರಿ ಹೇಳಿ ಕಳುಹಿಸಿದ್ದರು. ಮಗಳು ಗಂಡನ ಮನೆಗೆ ವಾಪಸ್ ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕೆ ಹಣ ತೆಗೆದುಕೊಂಡು ಬಂದಿಲ್ಲ. ನೀನು ಒಬ್ಬಳೇ ಮಗಳು. ಆಸ್ತಿ ಮಾರಿ ತೆಗೆದುಕೊಂಡು ಬರಬೇಕಾಗಿತ್ತು. ವರದಕ್ಷಿಣೆ ತರದಿದ್ದರೆ ನೀನು ನಮ್ಮ ಮನೆಗೆ ಬರಬೇಡ. ಬಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು."
"ಕಾಲೇಜಿನ ತರಗತಿ ಮುಕ್ತಾಯವಾದ ನಂತರ ಆಗಸ್ಟ್ 7ರಂದು ನನ್ನ ಹೆಂಡತಿ ಮಗಳನ್ನು ಕರೆದುಕೊಂಡು ಹೋಗಿ ಗಂಡನ ಮನೆಗೆ ಬಿಟ್ಟುಬಂದರು. ಆಗಲೂ ಗಂಡ, ಅತ್ತೆ, ಮಾವ, ಮೈದುನ ಎಲ್ಲರೂ ಸೇರಿ ಕಿರುಕುಳ ನೀಡಿದ್ದಾರೆ. ಹಣ ತರುವವರೆಗೂ ನಮ್ಮ ಮನೆಯಲ್ಲಿ ಇರುವುದು ಬೇಡ ಎಂದು ಆಗಸ್ಟ್ 10ರಂದು ಲಗೇಜ್ ಸಮೇತ ಮನೆಗೆ ವಾಪಸ್ ಕಳುಹಿಸಿದ್ದರು. ಸೆಪ್ಟೆಂಬರ್ 11ರಂದು ನಾನು, ನನ್ನ ಹೆಂಡತಿ ಮಗಳನ್ನು ಮತ್ತೆ ಕರೆದುಕೊಂಡು ಹೋದರೂ ಅವರು ನಮ್ಮನ್ನು ಮನೆಗೆ ಸೇರಿಸಲಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದರು."