ಬೆಂಗಳೂರು :ಸಂಸಾರದ ಮಧ್ಯೆ ಕಿರುಕುಳ ನೀಡಿದ ಹೆಂಡತಿಯ ಪರಿಚಯಸ್ಥನ ಮೇಲೆ ಹಲ್ಲೆ ಮಾಡಿದ ಗಂಡ ಜೈಲುಪಾಲಾದರೆ, ಇತ್ತ ಅದೇ ಪರಿಚಯಸ್ಥ ವ್ಯಕ್ತಿಯಿಂದ ಜೀವ ಬೆದರಿಕೆ ಇದೆ ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
22 ವರ್ಷದ ಮಹಿಳೆ ನೀಡಿರುವ ದೂರಿನ ಅನ್ವಯ ಕುಮಾರಸ್ವಾಮಿ ಎಂಬಾತನ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಂಟರೆಸ್ಟಿಂಗ್ ವಿಚಾರವೇನೆಂದರೆ, ಕುಮಾರಸ್ವಾಮಿಯ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ದೂರುದಾರಳ ಗಂಡ ಸುಮಂತ್ ಎಂಬಾತನನ್ನು ಕಳೆದ ಜನವರಿ ತಿಂಗಳಲ್ಲಿ ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದರು.
ಮಹಿಳೆಯ ಆರೋಪ ಹೀಗಿದೆ: ''ತನಗೆ ಪರಿಚಯವಿದ್ದ ಕುಮಾರಸ್ವಾಮಿ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ, ಸುಮಂತನನ್ನು ತಾನು 2-3 ವರ್ಷ ಪ್ರೀತಿಸಿ ಮದುವೆಯಾಗಿದ್ದೆ. ಆದರೂ ಸಹ ನಾನು ಕೆಲಸಕ್ಕೆ ಹೋಗುವಾಗ ಕುಮಾರಸ್ವಾಮಿ ಬಂದು ಅಡ್ಡಗಟ್ಟಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇಲ್ಲದಿದ್ದರೆ, ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಸುತ್ತಿದ್ದ. ಫೆಬ್ರವರಿ 3ರಂದು ಚಂದ್ರಾಲೇಔಟ್ನಲ್ಲಿರುವ ತನ್ನ ಮನೆಗೆ ಬಂದಿದ್ದ ಆರೋಪಿ, 'ನೀನು ನನಗೆ ಬೇಕು, ಗಂಡನನ್ನ ಬಿಟ್ಟು ನನ್ನ ಜೊತೆ ಬಾ' ಎನ್ನುತ್ತ ಮೈ-ಕೈ ಮುಟ್ಟಿ ಎಳೆದಾಡಿದ್ದಾನೆ. ಆ ಸಂದರ್ಭದಲ್ಲಿ ತನ್ನ ತಾಯಿ ಇದ್ದಿದ್ದರಿಂದ 'ಇವತ್ತು ನೀನು ಮಿಸ್ ಆಗಿದ್ದೀಯಾ, ನಿನ್ನ ಮೇಲೆ ಆ್ಯಸಿಡ್ ದಾಳಿ ಮಾಡುತ್ತೇನೆ'' ಎಂದು ಆರೋಪಿ ಬೆದರಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ.