ಬೆಂಗಳೂರು:ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಮಳೆ ಇದೀಗರಾಜಧಾನಿ ಬೆಂಗಳೂರಿನಲ್ಲೂ ಆರ್ಭಟಿಸಿದೆ. ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿರುವ ಘಟನೆ ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇಔಟ್ನಲ್ಲಿ ನಡೆದಿದೆ. ರಾತ್ರಿ ಆರಂಭವಾದ ಅನಿರೀಕ್ಷಿತ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಇಡೀ ರಾತ್ರಿ ಏರಿಯಾದ ನಿವಾಸಿಗಳು ನಿದ್ರೆಯಿಲ್ಲದೆ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗೆ ಮನೆ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಪರದಾಡಿದ ಏರಿಯಾದ ಜನ ಬೆಳಗ್ಗೆ ಮಳೆ ನಿಂತ ಬಳಿಕ ಕೆಸರುಮಯವಾದ ಮನೆಗಳನ್ನು ಸ್ವಚ್ಛಗೊಳಿಸುವುದರಲ್ಲಿ ತೊಡಗಿದ್ದಾರೆ.
ಪ್ರತಿ ಬಾರಿ ಮಳೆ ಬಂದಾಗ ಇದೇ ಸ್ಥಿತಿ; ಮತ್ತೊಂದೆಡೆ ಏರಿಯಾದ ಇಡೀ ರಸ್ತೆಗಳು ಜಲಾವೃತಗೊಂಡಿದ್ದು, ಮನೆಯಿಂದ ಹೊರಬರುವುದೇ ದುಸ್ತರವಾಗಿದೆ. ಪ್ರತೀ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮನೆಯಲ್ಲಿರುವ ಸಾಮಗ್ರಿಗಳು ಹಾನಿಗೊಳಗಾಗುತ್ತಿವೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುತ್ತಿದೆ' ಎನ್ನುತ್ತಿರುವ ಜನರು, ಮಳೆಯ ಮುನ್ಸೂಚನೆ ಇದ್ದರೂ ಸಹ ಮುನ್ನೆಚ್ಚರಿಕೆ ವಹಿಸದ ಪಾಲಿಕೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಬಿಟಿಎಂ, ಸಿಟಿ ಮಾರ್ಕೆಟ್ ರಸ್ತೆಗಳು ಜಲಾವೃತ : ಮಳೆಗೆ ಬನಶಂಕರಿ, ಬಿಟಿಎಂ ಲೇಔಟ್, ಬಸವನಗುಡಿ ಕೆ.ಆರ್.ಮಾರ್ಕೆಟ್, ಜೆ.ಸಿ.ರಸ್ತೆ, ರಾಜಾಜಿನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಯಶವಂತಪುರ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಆರಂಭವಾದ ಮಳೆ ಬೆಳಗ್ಗೆವರೆಗೂ ಸುರಿದಿದೆ. ಪರಿಣಾಮ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.