ಬೆಳಗಾವಿ:ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಗೋಕಾಕ್ ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮ ಗೋಕಾಕ್ ಪಟ್ಟಣಕ್ಕೆ ಜಲದಿಗ್ಬಂಧನವಾಗಿದ್ದು, ಇಲ್ಲಿನ ಉಪ್ಪಾರಪೇಟೆ, ಹಳೆ ದನದ ಪೇಟೆ, ಮಟನ್ ಮಾರ್ಕೆಟ್, ಕುಂಬಾರ ಗಲ್ಲಿ ಸೇರಿ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದೆ.
ಘಟಪ್ರಬಾ ನದಿಗೆ 80 ಸಾವಿರ ಕ್ಯೂಸೆಕ್ ನೀರಿನ ಒಳಹರಿವು: ಘಟಪ್ರಭಾ ನದಿಗೆ ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳ ಹಾಗೂ ಹಿಡಕಲ್ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ನೀರು ಸದ್ಯ ಗೋಕಾಕ್ ಪಟ್ಟಣಕ್ಕೆ ನುಗ್ಗಿದ್ದರಿಂದ ಗೋಕಾಕ್ನ ಹಲವು ಬಡಾವಣೆಗಳು ಜಲಾವೃತವಾಗಿವೆ. ಪ್ರವಾಹಕ್ಕೆ ಸಿಲುಕಿ ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿದೆ.
ಶಾಶ್ವತ ಪರಿಹಾರಕ್ಕೆ ಸ್ಥಳೀಯರ ಒತ್ತಾಯ; ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ಥಳೀಯ ನಿವಾಸಿ ಮಹೇಶ ಬಡೆಪ್ಪಗೋಳ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ಮೂರು ನದಿಗಳ ಸಂಗಮ ಗೋಕಾಕ್. ಲೋಳಸೂರ ಸೇತುವೆ ಮೇಲೆ ನೀರು ಬಂದರೆ ನಮ್ಮ ಗಲ್ಲಿಗಳಿಗೆ ನೀರು ಬರುತ್ತದೆ. ಆಗ ಇಲ್ಲಿನ ಜನರ ಪರಿಸ್ಥಿತಿ ಶೋಚನೀಯ. ನೀರು ಮನೆಯೊಳಗೆ ನುಗ್ಗುತ್ತಿದ್ದಂತೆ ಉಟ್ಟ ಬಟ್ಟೆಯಲ್ಲಿ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಹಾಗಾಗಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.