ಧಾರವಾಡಕ್ಕೆ ಮಾವು ಅಭಿವೃದ್ಧಿ ಕೇಂದ್ರ ಮಂಜೂರು (ETV Bharat) ಧಾರವಾಡ:ಉತ್ತರ ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಂತಸ ಸುದ್ದಿ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಅನುಮತಿ ನೀಡಿ ಅನುದಾನ ಮಂಜೂರು ಮಾಡಿದೆ. ಇದು ಈ ಭಾಗದಲ್ಲಿ ಮಾವು ಕೃಷಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಇತ್ತೀಚೆಗೆ ಹವಾಮಾನ ಬದಲಾವಣೆಯಿಂದಾಗಿ ಸುಸ್ಥಿರ ಮಾರುಕಟ್ಟೆ ಇಲ್ಲದೇ ಮಾವು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಎಷ್ಟೋ ರೈತರು ಇರುವ ತೋಟಗಳನ್ನೇ ತೆರವುಗೊಳಿಸುವ ನಿರ್ಧಾರಕ್ಕೂ ಬಂದಿದ್ದರು. ಆದರೆ ಧಾರವಾಡ ಆಫೂಸ್ ಮಾವಿಗೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸಲು ಕೇಂದ್ರದ ನಿರ್ಧಾರ ಪೂರಕವಾಗಲಿದೆ.
ಉತ್ತರ ಕರ್ನಾಟಕದಲ್ಲಿ ವಿವಿಧ ಮಾವಿನ ತಳಿಗಳ ಬೆಳೆಯುವ ಅಗತ್ಯತೆ ಇದ್ದು, ಮಾವು ತಳಿಗಳ ಅಭಿವೃದ್ಧಿ, ಸಂಶೋಧನೆ, ಪ್ರಾತ್ಯಕ್ಷಿಕೆ, ರೈತರಿಗೆ ತರಬೇತಿ, ಮಾವಿನ ಹಣ್ಣು ಮತ್ತು ಮಾವಿನ ಕಾಯಿ ರಫ್ತು ವ್ಯವಸ್ಥೆ ಒದಗಿಸುವ ಕೆಲಸಗಳನ್ನು ಈ ಕೇಂದ್ರ ಮಾಡಲಿದೆ.
ಧಾರವಾಡ ಪಕ್ಕದ ಜಿಲ್ಲೆಗಳಿಗೂ ಅನುಕೂಲ:ಧಾರವಾಡ ಜಿಲ್ಲೆಯಲ್ಲಿ 8,400 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಅಕ್ಕಪಕ್ಕದ ಜಿಲ್ಲೆಗಳಾಗಿರುವ ಕೊಪ್ಪಳ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ ಮತ್ತು ಗದಗ ಭಾಗದಲ್ಲಿ ಮಾವಿನ ತೋಟಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂದಾಜು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿವೆ. ಹೀಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕರ್ನಾಟಕಕ್ಕೆ ಮಾವು ಅಭಿವೃದ್ಧಿ ಕೇಂದ್ರ ಮಂಜೂರು ಮಾಡಿದೆ.
ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಧಾರವಾಡ ಜಿಲ್ಲೆಯಲ್ಲಿರುವ ಕುಂಭಾಪುರ ಫಾರ್ಮ್ನಲ್ಲಿ ಈಗಾಗಲೇ ಒಂದು ಎಕರೆ ಜಾಗ ಗುರುತಿಸಲಾಗಿದೆ. ಒಟ್ಟು 7.5 ಕೋಟಿ ರೂಪಾಯಿ ಅನುದಾನ ಕೇಂದ್ರದಿಂದ ಮಂಜೂರಾಗಿದ್ದು, ಇನ್ನೆರಡು ತಿಂಗಳಿನಲ್ಲಿ ಕೇಂದ್ರ ಸ್ಥಾಪನೆಯ ಕಾರ್ಯಗಳು ಆರಂಭವಾಗಲಿವೆ.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಹೇಳಿಕೆ: "ಈ ಭಾಗದ ಮಾವು ರೈತರಿಗೆ ಅನುಕೂಲವಾಗಲಿ ಎಂದು ನಮ್ಮ ಇಲಾಖೆಯಿಂದ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಮಾವು ಅಭಿವೃದ್ಧಿ ಕೇಂದ್ರಕ್ಕೆ ಕೇಂದ್ರ ಅನುಮತಿ ನೀಡಿ, ಅನುದಾನ ಮಂಜೂರು ಮಾಡಿದೆ. ಮಾವು ಇಳುವರಿ ಹೆಚ್ಚಿಸಲು, ಸಂಶೋಧನೆ, ಕೋಲ್ಡ್ ಸ್ಟೋರೇಜ್, ಮಾರುಕಟ್ಟೆ ಸೌಲಭ್ಯ ಸೇರಿದಂತೆ ಇನ್ನಿತರೆ ಅನುಕೂಲಗಳನ್ನು ಬೆಳೆಗಾರರಿಗೆ ಈ ಕೇಂದ್ರದ ಮೂಲಕ ಒದಗಿಸಲಾಗುವುದು" ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ ಮಾಹಿತಿ ನೀಡಿದರು.
ಸಂತಸ ವ್ಯಕ್ತಪಡಿಸಿದ ರೈತ: "ಜಿಲ್ಲೆಯ ಮಾವು ಬೆಳೆಗಾರರಿಗೆ ಮಾರುಕಟ್ಟೆ, ರಫ್ತು ಸೇರಿ ಹಲವು ಅನುಕೂಲಗಳನ್ನು ಮಾಡಿಕೊಡಲು ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುತ್ತಿರುವುದು ಒಳ್ಳೆಯದು. ಈ ರೀತಿಯ ಕೆಲಸಗಳು ಹೀಗೇ ಮುಂದುವರಿಯಬೇಕು" ಎಂದು ರೈತ ಮಂಜುನಾಥ ನಡಟ್ಟಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಕಡಲಿಗಿಳಿಯುವ ಕೆಚ್ಚೆದೆಯ ಯುವತಿ; ಮೀನು ಉಪ್ಪಿನಕಾಯಿ ಉದ್ಯಮದಲ್ಲಿ ಯಶ ಸಾಧಿಸಿದ ಛಲಗಾತಿ - From Fisher Girl To Entrepreneur