ಕರ್ನಾಟಕ

karnataka

ETV Bharat / state

ಮುಂಡಗೋಡದಲ್ಲಿ ಬಿಗಡಾಯಿಸಿದ ಮಂಗನಬಾವು ಕಾಯಿಲೆ ; 3 ದಿನ ವಸತಿ ಶಾಲೆಗೆ ರಜೆ ಘೋಷಿಸಿದ ಡಿಸಿ - MANGANA BAVU DISEASE

ಕಾರವಾರ ತಾಲೂಕಿನ ವಸತಿ ಶಾಲೆಯೊಂದರ ಮಕ್ಕಳಲ್ಲಿ ಮಂಗನಬಾವು ಕಾಯಿಲೆ ಉಲ್ಭಣಗೊಂಡಿದೆ. ಹೀಗಾಗಿ, ಜಿಲ್ಲಾಡಳಿತ ಮೂರು ದಿನಗಳವರೆಗೆ ವಸತಿ ಶಾಲೆಗೆ ರಜೆ ಘೋಷಣೆ ಮಾಡಿದೆ.

Doctors Team
ವೈದ್ಯರ ತಂಡ (ETV Bharat)

By ETV Bharat Karnataka Team

Published : Nov 22, 2024, 5:32 PM IST

Updated : Nov 22, 2024, 6:43 PM IST

ಕಾರವಾರ (ಉತ್ತರ ಕನ್ನಡ) : ಜಿಲ್ಲೆಯ ಮುಂಡಗೋಡ ತಾಲೂಕಿನ ವಸತಿ ಶಾಲೆಯೊಂದರ ಮಕ್ಕಳಲ್ಲಿ ಮಂಗನಬಾವು ಕಾಯಿಲೆ ಕಾಣಿಸಿಕೊಂಡಿದೆ. ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಗೊಂಡು 120ಕ್ಕೂ ಹೆಚ್ಚು ಮಕ್ಕಳನ್ನು ಚಿಕಿತ್ಸೆಗೊಳಪಡಿಸಿದ್ದು, ಇದೀಗ ಜಿಲ್ಲಾಡಳಿತ ಮೂರು ದಿನಗಳ ಕಾಲ ವಸತಿ ಶಾಲೆಗೆ ರಜೆ ಘೋಷಣೆ ಮಾಡಿದೆ. ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

ಜಿಲ್ಲೆಯ ಮುಂಡಗೋಡದ ಬೃಂದಾವನ ವಸತಿ ಬಡಾವಣೆಯಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗನಬಾವು ಕಾಯಿಲೆ ಅಬ್ಬರ ಜೋರಾಗಿದೆ. ಇಲ್ಲಿ‌ನ 6 ರಿಂದ 10 ನೇ ತರಗತಿ ಮಕ್ಕಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶೀತ, ಜ್ವರ, ಕೆಮ್ಮು ಹಾಗೂ ಮುಖದ ಬಾವು ಕಾಣಿಸಿಕೊಂಡಿತ್ತು. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕಳೆದ ಎರಡು ದಿನದ ಹಿಂದೆ ಒಬ್ಬರಿಂದ ಮತ್ತೊಬ್ಬರಿಗೆ ಕಾಯಿಲೆ ಹರಡಿ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿತ್ತು. ಇದೀಗ ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ಆದರೆ, ವಸತಿ ಶಾಲೆಯಲ್ಲಿ 210 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದೀಗ ಮತ್ತೆ ಸೋಂಕಿನ ಆತಂಕ ಶುರುವಾಗಿದೆ.

ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿದರು (ETV Bharat)

ರೋಗ ಉಲ್ಬಣ:ರೋಗ ಜೋರಾದ ಹಿನ್ನೆಲೆ ಪಾಲಕರನ್ನು ಕರೆಸಿ ಅವರೊಂದಿಗೆ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಂಕಿತರನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗವು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಹೆಚ್ಚಾಗಿರುವ ಸಾಧ್ಯತೆ ಇದೆ. ಆರಂಭದಲ್ಲಿ ಶೀತ, ನಂತರ ಜ್ವರ, ಕೆಮ್ಮು ಕಾಣಿಸಿಕೊಂಡು ಬಳಿಕ ಮುಖದ ಮೇಲೆ ಬಾವು ಏಳಲಿದೆ. ಸದ್ಯ‌ ಎಲ್ಲ ಮಕ್ಕಳಿಗೂ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದ್ದೇನು?:''ಮುಂಡಗೋಡು ವಸತಿ ನಿಲಯದ ಮಕ್ಕಳಲ್ಲಿ ಮಂಗನಬಾವು ಕಾಯಿಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಡಗೋಡು ಇಂದಿರಾ ವಸತಿ ಶಾಲೆಗೆ ಮೂರು ದಿನ ರಜೆ ಕೊಡುತ್ತಿದ್ದೇವೆ. ಈಗಾಗಲೇ ವಸತಿ ನಿಲಯದ ಕೆಲವರಲ್ಲಿ ಜ್ವರ ಇರುವ ಹಿನ್ನೆಲೆ ವೈದ್ಯಕೀಯ ತಂಡವನ್ನ ಮುಂಡಗೋಡ ವಸತಿ ನಿಲಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಕೆಲವರು ಮನೆಗೆ ಹೋಗಬೇಕು ಅಂದವರಿಗೆ ಮನೆಗೆ ಕಳುಹಿಸುತ್ತೇವೆ. ಆದರೆ ಮನೆಗೆ ಹೋದಾಗ ಸೊಂಕು ಬೇರೆಯವರಿಗೆ ತಗಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮನೆಗೆ ಹೋದವರನ್ನು ಐಸೋಲೇಷನ್​ನಲ್ಲಿರುವಂತೆ ನಿಗಾ ವಹಿಸಲು ಸಂಬಂಧಿಸಿದ ಪಂಚಾಯತಿಗೆ ಸೂಚನೆ ನೀಡಲಾಗಿದೆ'' ಎಂದು ಹೇಳಿದರು.

ಇದನ್ನೂ ಓದಿ :ಉತ್ತರ ಕನ್ನಡದಲ್ಲಿ 100ರ ಗಡಿ ದಾಟಿದ ಮಂಗನ ಕಾಯಿಲೆ: ಸರ್ಕಾರದಿಂದ ಸಿಗುತ್ತಿಲ್ಲ ಪರಿಣಾಮಕಾರಿ ಔಷಧಿ - KFD Disease

Last Updated : Nov 22, 2024, 6:43 PM IST

ABOUT THE AUTHOR

...view details