ಮಂಗಳೂರು:ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರ ಲೋಕಸಭಾ ಚುನಾವಣೆಯಲ್ಲಿ ಪ್ರತಿಧ್ವನಿಸುತ್ತಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರ ಅಭಿವೃದ್ದಿಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಈ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.
ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆದಿದ್ದರೂ ಅದು ಯಾವ ರೀತಿ ಅನುಷ್ಠಾನಗೊಳ್ಳಬೇಕಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕಾಮಗಾರಿಯ ನಡೆದಿದೆ. ಮೀನುಗಾರಿಕೆಯ ಅಭಿವೃದ್ದಿ ಯೋಜನೆಗಳನ್ನು ಮುಂದಿಟ್ಟುಕೊಂಡು ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯಬೇಕಿದ್ದರೂ ಅದು ಕೇವಲ, ರಸ್ತೆ, ತೋಡು ಅಭಿವೃದ್ಧಿಗೆ ಸೀಮಿತವಾಗಿದೆ ಎಂಬ ಆರೋಪವಿದೆ.
ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮಾಹಿತಿ:
- ಬಂದರಿನ ಅಭಿವೃದ್ಧಿಗೆ ಮಂಜೂರು ಮಾಡಲಾದ 150/- ಕೋಟಿಯನ್ನು ನದಿ ಮುಂಭಾಗವನ್ನು ಅಭಿವೃದ್ಧಿಪಡಿಸಲು ವರ್ಗಾಯಿಸಲಾಯಿತು.
- ಸ್ಮಾರ್ಟ್ ರಸ್ತೆ ಮತ್ತು ಸಂಪರ್ಕ ರಸ್ತೆ ಅಭಿವೃದ್ಧಿಗೆ 250/- ಕೋಟಿ ಮಂಜೂರು. (8 ಪ್ಯಾಕೇಜುಗಳನ್ನು ಮಾಡಿದೆ)
- ಮಹಾಕಾಳಿಪಡ್ಪು ರಸ್ತೆಗೆ 49/- ಕೋಟಿ ಮಂಜೂರು.
- ನೀರು ಪೂರೈಕೆಗೆ 150/- ಕೋಟಿ
- ತುಂಬೆಯಲ್ಲಿ ಜಾಕ್ ವೆಲ್ ಅಭಿವೃದ್ಧಿಗೆ 10/- ಕೋಟಿ ರೂ.
- ಅಂತಾರಾಷ್ಟ್ರೀಯ ಈಜುಕೊಳ ಅಭಿವೃದ್ಧಿಗೆ 24.5 ಕೋಟಿ ರೂ.
- ಶಟಲ್ ಕಾಕ್ ಮತ್ತು ಕಬ್ಬಡಿ ಸ್ಟೇಡಿಯಂ ಅಭಿವೃದ್ಧಿಗೆ 35/- ಕೋಟಿ ರೂ.
- 13 ಒಟಿ ಮತ್ತು 37 ಐಸಿಯು ಒಳಗೊಂಡಿರುವ ವೆನ್‌ಲಾಕ್‌ನಲ್ಲಿ 250 ಹಾಸಿಗೆಗಳ ಆಸ್ಪತ್ರೆಯ ಅಭಿವೃದ್ಧಿಗೆ 75/- ಕೋಟಿ ರೂ.
- ಕಮಾಂಡ್ ಕಂಟ್ರೋಲ್ ರೂಂಗೆ 55/- ಕೋಟಿಗಳು (2 ಹಂತಗಳು)
- ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿಗೆ 18/- ಕೋಟಿ ರೂ
- ಕೆರೆ ಅಭಿವೃದ್ಧಿ: ಕಾವೂರು ಕೆರೆ- 8.5 ಕೋಟಿ, ಗುಜ್ಜರಕೆರೆ ಕೆರೆ 5 ಕೋಟಿ ರೂ.
- ಕೌಶಲ್ಯ ಅಭಿವೃದ್ಧಿ 5 ಕೋಟಿ ರೂ.
- ಸ್ಮಾರ್ಟ್ ಶಾಲೆಗಳು: 13 ಸ್ಮಾರ್ಟ್ ಶಾಲೆಗಳಿಗೆ 5 ಕೋಟಿ ರೂ.
- ಹಂಪನಕಟ್ಟಾ ರೆವಿನ್ಯೂ ಜನರೇಷನ್‌ನಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್- ವರ್ಷಕ್ಕೆ 3.3 ಕೋಟಿ ರೂ.
- ಸೆಂಟ್ರಲ್ ಮಾರ್ಕೆಟ್ 3 ಕೋಟಿ ರೂ.
ನಳಿನ್ ಕುಮಾರ್ ಕಟೀಲ್ ಹೇಳಿಕೆ:ಸ್ಮಾರ್ಟ್ ಸಿಟಿ ಅಭಿವೃದ್ಧಿ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ''ಸುಮಾರು 2,000 ಕೋಟಿ ಸ್ಮಾರ್ಟ್ ಸಿಟಿಗೆ ಬಿಡುಗಡೆ ಆಗಿದೆ. ಇದರಲ್ಲಿ 1 ಸಾವಿರ ಕೊಟಿ ಕಾಮಗಾರಿ ನಡೆದಿದೆ. ರಸ್ತೆಗಳ ಕಾಂಕ್ರೀಟ್ ಮಾಡಲಾಗಿದೆ. ಕದ್ರಿ ಪಾರ್ಕ್ಗಳ ಅಭಿವೃದ್ದಿ, ಪುರಭವನ ಬಳಿಯ ಅಂಡರ್ ಪಾಸ್, ಎಲ್ಲಾ ಸರ್ಕಲ್ಗಳ ಅಲಂಕಾರ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಅಂತಾರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಈಗಾಗಲೇ ಮುಗಿದೆ. ಮಂಗಳಾದೇವಿ, ಕಾರ್ ಸ್ಟ್ರೀಟ್ ಅಭಿವೃದ್ದಿಯನ್ನು ಮಾಡಲಾಗಿದೆ. ವಾಟರ್ ಫ್ರಂಟ್ ಕಾಮಗಾರಿ ನಡೆದಿದೆ. ಹೀಗೆ ವಿವಿಧ ಯೋಜನೆಗಳ ಮೂಲಕ ಮಂಗಳೂರು ಅಭಿವೃದ್ಧಿಯಾಗಿದೆ. ಮಂಗಳೂರು ಸುಂದರೀಕರಣ ಆಗಿದೆ. ಇದು 20 ಸಾವಿರ ಕೋಟಿಯ ಯೋಜನೆ. ಇದರಲ್ಲಿ ಆದಾಯ ಉತ್ಪಾದಿಸುವ ಯೋಜನೆಗಳು ಮಾಡಲಾಗುತ್ತಿದೆ'' ಎಂದು ತಿಳಿಸಿದರು.