ಮಂಗಳೂರು: ಜಮೀನಿನಲ್ಲಿ ಪಾಲು ಕೇಳಲು ಮನೆಗೆ ಬಂದಿದ್ದ ತನ್ನ ಸ್ವಂತ ತಮ್ಮನನ್ನೇ ಹೊಡೆದು ಹತ್ಯೆ ಮಾಡಿದ್ದ ಅಣ್ಣನಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಎಸ್.ಜಿ. ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ನಂದರಬೆಟ್ಟುವಿನ ಐತಪ್ಪ ನಾಯ್ಕ ಯಾನೆ ಪುಟ್ಟು ನಾಯ್ಕ (45) ಶಿಕ್ಷೆಗೊಳಗಾದ ಅಪರಾಧಿ. ಈತ ತನ್ನ ತಮ್ಮ ಬಾಳಪ್ಪ ಯಾನೆ ರಾಮ ನಾಯ್ಕ (35) ನನ್ನು ಕೊಲೆಗೈದಿದ್ದರು.
ಪ್ರಕರಣದ ವಿವರ:2022ರ ಮೇ 10 ರಂದು ಕನ್ಯಾನ ಗ್ರಾಮದ ನಂದರಬೆಟ್ಟುವಿನಲ್ಲಿ ತನ್ನ ಚಿಕ್ಕಪ್ಪನ ಮನೆಯಲ್ಲಿ ಪೂಜೆ ಇದ್ದ ಕಾರಣ ಬಾಳಪ್ಪ ನಾಯ್ಕ ಅವರು ಬಂದಿದ್ದರು. ಅಲ್ಲಿಯೇ ಪಕ್ಕದಲ್ಲಿ ತನ್ನ ಕುಟುಂಬದ ಮನೆ ಇತ್ತು. ಅಲ್ಲಿ ಅಣ್ಣ ಐತಪ್ಪ ನಾಯ್ಕ ನೆಲೆಸಿದ್ದನು. ಹಾಗಾಗಿ ಬಾಳಪ್ಪ ನಾಯ್ಕ ಅಲ್ಲಿಗೆ ಹೋಗಿದ್ದರು.
ಅಲ್ಲಿ ಜಮೀನಿನ ವಿಚಾರವಾಗಿ ಮಾತುಕತೆ ನಡೆದು ಪಾಲಿನ ವಿಷಯವು ಪ್ರಸ್ತಾಪವಾಗಿತ್ತು. ಆಗ ಆಕ್ರೋಶಗೊಂಡ ಆರೋಪಿ ಐತಪ್ಪ ನಾಯ್ಕ ಮನೆಯಲ್ಲಿದ್ದ ಮರದ ನೊಗದಿಂದ ಬಾಳಪ್ಪ ನಾಯ್ಕ ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಇದರಿಂದ ಬಾಳಪ್ಪ ನಾಯ್ಕ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ತನಿಖಾಧಿಕಾರಿಯಾಗಿದ್ದ ವಿಟ್ಲ ಠಾಣೆಯ ಇನ್‌ಸ್ಪೆಕ್ಟರ್ ನಾಗರಾಜ್ ಹೆಚ್.ಇ ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 17 ಮಂದಿ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ಪೈಕಿ ಮರಣೋತ್ತರ ಪರೀಕ್ಷೆ ನಡೆಸಿದ್ದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ವರ್ಷಾ ಎ. ಶೆಟ್ಟಿ ಹಾಗೂ ಎಫ್‌ಎಸ್ಎಲ್ ಅಧಿಕಾರಿ ಡಾ.ಗೀತಾಲಕ್ಷ್ಮೀ ಅವರ ಸಾಕ್ಷ್ಯ ಪ್ರಮುಖವಾಗಿತ್ತು.
ನ್ಯಾಯಾಧೀಶೆ ಸುನೀತಾ ಎಸ್.ಜಿ. ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ 50 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಮೂರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಉಳಿದ ಮೊತ್ತವನ್ನು ಕೊಲೆಯಾದ ಬಾಳಪ್ಪ ಅವರ ತಾಯಿಗೆ ನೀಡುವಂತೆ ಆದೇಶಿಸಿದ್ದಾರೆ. ಅಲ್ಲದೆ ಬಾಳಪ್ಪ ಅವರ ತಾಯಿಗೆ ಗರಿಷ್ಠ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕ ಹರೀಶ್ಚಂದ್ರ ಉದಿಯಾವರ್ ವಾದಿಸಿದ್ದರು.
ಇದನ್ನೂ ಓದಿ: ರಾಮನಗರ: ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದ ಯುವಕ ವಶಕ್ಕೆ - CAMERA IN GIRLS TOILET