ಮಂಗಳೂರು: ಸ್ನಾನ ಮಾಡುತ್ತಿದ್ದ ಅಪ್ರಾಪ್ತೆಯ ವಿಡಿಯೋ ಚಿತ್ರೀಕರಣ ಮಾಡಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೊ) ಎಫ್ಟಿಎಸ್ಸಿ-1 ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಗಗನ್ (24) ಶಿಕ್ಷೆಗೊಳಗಾದವ.
ಪ್ರಕರಣ ನಡೆದು ಕೇವಲ 9 ತಿಂಗಳಿನಲ್ಲೇ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೊ) ಎಫ್ಟಿಎಸ್ಸಿ-1 ನ್ಯಾಯಾಧೀಶ ವಿನಯ್ ದೇವರಾಜ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಐಪಿಸಿ ಸೆಕ್ಷನ್ 354 (ಸಿ) ಅಡಿಯಲ್ಲಿ ಆರೋಪಿಗೆ 1 ವರ್ಷ ಸಾದಾ ಸಜೆ, 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಾದಾ ಶಿಕ್ಷೆ ಅನುಭವಿಸಲು ಸೂಚಿಸಿದೆ. ದಂಡದ ಮೊತ್ತದಲ್ಲಿ 10 ಸಾವಿರ ರೂ. ಮತ್ತು ಪ್ರತ್ಯೇಕವಾಗಿ 1 ಲಕ್ಷ ರೂ. ಹಣವನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ:ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ 2024ರ ಮಾ.10ರಂದು ರಾತ್ರಿ 8:45ರ ಸುಮಾರಿಗೆ ಅಪ್ರಾಪ್ತ ಬಾಲಕಿ ತನ್ನ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆರೋಪಿ ಗಗನ್ (24) ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಈ ವೇಳೆ ಮೊಬೈಲ್ ಲೈಟ್ ಕಂಡು ಬಾಲಕಿ ಕೂಗಿದಾಗ ಅವರ ತಾಯಿ ಬಂದಿದ್ದರು. ಈ ವೇಳೆ ಆರೋಪಿ ಓಡಿಹೋಗಿ ತಪ್ಪಿಸಿಕೊಂಡಿದ್ದನು ಎಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಐಗಳಾದ ಗುರಪ್ಪ ಕಾಂತಿ ಮತ್ತು ರೇವಣ್ಣ ಸಿದ್ದಪ್ಪ ಜಿ ತನಿಖೆ ನಡೆಸಿದ್ದರು. ಬಳಿಕ ಪ್ರಕರಣ ಸಂಬಂಧ ಎಸ್ಐ ಸತೀಶ್ ಕೆ.ಎಸ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.