ತುಮಕೂರು:ದೊಡ್ಡ ದೊಡ್ಡ ಮಾಲ್ಗಳಲ್ಲಿ ಆಫರ್ಗಳನ್ನು ಕೊಡುವುದು ನೋಡಿದ್ದೇವೆ. ಬೈ ಒನ್ ಗೆಟ್ ಒನ್ ಫ್ರೀ ಆಫ್ ಕೇಳಿದ್ದೇವೆ. ಆದರೆ, ತುಮಕೂರಿನ ಈರುಳ್ಳಿ ಮಂಡಿ ಮಾಲೀಕ ನೃಪತುಂಗ ಎನ್ನುವವರು, ತನ್ನ ಅಂಗಡಿಯಲ್ಲಿ ಈರುಳ್ಳಿ ಖರೀದಿ ಮಾಡಿದರೆ ಪ್ರತಿದಿನ ಗ್ರಾಹಕರಿಗೆ ಬಹುಮಾನ ಕೊಡುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ, ಯುಗಾದಿ ಹಬ್ಬಕ್ಕೆ ಚಿನ್ನದುಂಗರದ ಉಡುಗೊರೆ ಕೊಡಲು ಸಹ ಮುಂದಾಗಿದ್ದಾರೆ.
ಈರುಳ್ಳಿ ಕೊಳ್ಳಿ, ಬಹುಮಾನ ಗೆಲ್ಲಿ... ಹೀಗೊಂದು ಆಫರ್ ಬೋರ್ಡ್ ಅನ್ನು ತುಮಕೂರಿನ ಅಂತರಸನಹಳ್ಳಿಯ ಮಾರುಕಟ್ಟೆಯಲ್ಲಿ ಹಾಕಿರುವ ನೃಪತುಂಗ ಅವರು, ಪಿ.ವಿ.ನೃಪತುಂಗ ಅಂಡ್ ಸನ್ಸ್ನ ಈರುಳ್ಳಿ ಮಂಡಿಯಿಂದ ಈ ವಿಶೇಷ ಆಫರ್ ಘೋಷಣೆ ಮಾಡಿದ್ದಾರೆ.
ಈರುಳ್ಳಿ ಮಂಡಿ ಮಾಲೀಕನ ಹೊಸ ಪ್ಲಾನ್ (ETV Bharat) 100 ರೂಪಾಯಿ ಮೇಲ್ಪಟ್ಟು ಈರುಳ್ಳಿ ಖರೀದಿ ಮಾಡಿದವರಿಗೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ. ಈರುಳ್ಳಿ ಖರೀದಿಸಿದ್ದ ಪ್ರತಿಯೊಬ್ಬರಿಗೂ ಕೂಪನ್ ಕೊಡಲಾಗುತ್ತದೆ. ಅದರಲ್ಲಿ ಗ್ರಾಹಕರ ಮಾಹಿತಿ ಬರೆದು ಲಕ್ಕಿ ಡ್ರಾ ಡಬ್ಬಿಯಲ್ಲಿ ಹಾಕಲಾಗುತ್ತದೆ. ಪ್ರತಿ ದಿನ ರಾತ್ರಿ 7 ಗಂಟೆಗೆ ಗ್ರಾಹಕರ ಸಮ್ಮುಖದಲ್ಲೇ ಆ ಬಾಕ್ಸ್ ಓಪನ್ ಮಾಡಲಾಗುತ್ತದೆ. ಲಕ್ಕಿ ಡಿಪ್ ಮೂಲಕ ಈ ಕೂಪನ್ ಆಯ್ಕೆ ನಡೆಸಲಾಗುತ್ತದೆ. ವಿಜೇತರಿಗೆ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ಕೊಡಲಾಗುತ್ತಿದೆ ಎನ್ನುತ್ತಾರೆ ಮಂಡಿ ಮಾಲೀಕ ನೃಪತುಂಗ.
ಈರುಳ್ಳಿ ಗ್ರಾಹಕರಿಗೆ ವಿಶೇಷ ಆಫರ್ (ETV Bharat) ಈರುಳ್ಳಿ ಮಂಡಿ ಆರಂಭ ಮಾಡಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆ.1 ರಿಂದ ಮೇ 21ರ ವರೆಗೆ ನಿತ್ಯ ಈ ಆಫರ್ ಮುಂದುವರಿಯಲಿದೆ. ಇನ್ನೂ ವಿಶೇಷ ಅಂದರೆ ಯುಗಾದಿ ಹಬ್ಬಕ್ಕೆ ಬಹುಮಾನ ವಿಜೇತ ಗ್ರಾಹಕರಿಗೆ 10 ಗ್ರಾಂ ಚಿನ್ನದ ರಿಂಗ್ ಕೊಡುವ ಚಿಂತನೆ ಮಾಡಲಾಗಿದೆ. ಗ್ರಾಹಕರ ಆಕರ್ಷಣೆ ಮಾಡುವ ಉದ್ದೇಶ ಇದರ ಹಿಂದೆ ಇದ್ದರೂ, ದೊಡ್ಡ ದೊಡ್ಡ ಮಾಲ್ಗಳಲ್ಲಿ ಆಫರ್ ಕೊಡುವಾಗ ರೈತರ ಬೆಳೆಗಳಿಗೆ ಏಕೆ ಆಫರ್ ಕೊಡಬಾರದು? ಅನ್ನೋದು ನನ್ನ ಅಭಿಪ್ರಾಯ. ಪ್ರತಿದಿನ ಬೆಳಗ್ಗೆ ಮಂಡಿ ಓಪನ್ ಆದಾಗ ರೈತರ ಭಾವಚಿತ್ರಕ್ಕೆ ಪೂಜೆ ಮಾಡಿ ವ್ಯಾಪಾರ ಶುರು ಮಾಡುವುದು ಸಂಪ್ರದಾಯ. ಹಾಗಾಗಿ ರೈತರ ಬೆಳೆಗೆ ಆಫರ್ ನೀಡುತ್ತಿದ್ದೇನೆ ಎನ್ನುತ್ತಾರೆ ಮಂಡಿ ಮಾಲೀಕ ನೃಪತುಂಗ.
ಈರುಳ್ಳಿ ಮಂಡಿಯಿಂದ ಗ್ರಾಹಕರಿಗೆ ವಿಶೇಷ ಆಫರ್ (ETV Bharat) ಕೇವಲ ಈರುಳ್ಳಿಗೆ ಆಫರ್ ಕೊಟ್ಟು ಈ ಮಂಡಿ ಮಾಲೀಕ ಮುನ್ನೆಲೆ ಬಂದವರಲ್ಲ. ಮಂಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 27 ರಿಂದ 30 ಸಾವಿರ ರೂ. ಸಂಬಳ ಕೊಟ್ಟು, ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಜಾಹೀರಾತು ಕೊಟ್ಟು ಗಮನ ಸೆಳೆದಿದ್ದರು. ಪದವಿ ಓದಿದವರಿಗೂ 30 ಸಾವಿರ ಸಂಬಳ ಸಿಗದ ಈ ಕಾಲದಲ್ಲಿ, ಈರುಳ್ಳಿ ತೂಕ ಮಾಡುವವನಿಗೆ 30 ಸಾವಿರ ಕೊಡುತ್ತಾರೆಂಬ ಜಾಹೀರಾತು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಮಿಲಿಯನ್ ಗಟ್ಟಲೆ ವಿವ್ಸ್ ಕೂಡ ಅಗಿತ್ತು. ಒಟ್ಟಾರೆ ತುಮಕೂರಿನ ಈ ಈರುಳ್ಳಿ ಮಂಡಿ ಮಾಲೀಕ ಸದ್ಯ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದಾರೆ ಅಂದ್ರೆ ತಪ್ಪಲ್ಲ.
ಈರುಳ್ಳಿ ಗ್ರಾಹಕರಿಗೆ ವಿಶೇಷ ಆಫರ್ (ETV Bharat) ಇದನ್ನೂ ಓದಿ:ಏರುತ್ತಲೇ ಇದೆ ಚಿನ್ನದ ಬೆಲೆ: ಇಂದು ಕರ್ನಾಟಕದಲ್ಲಿ ಎಷ್ಟಿದೆ ಬಂಗಾರದ ದರ?; ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ - GOLD PRICE TODAY