ಬೆಂಗಳೂರು: ವಾಕಿಂಗ್‌ಗೆ ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಕೋಣನಕುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುರೇಶ್ (25) ಬಂಧಿತ ಆರೋಪಿ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್.ಬಿ.ಜಗಲಾಸರ್ (ETV Bharat) ಆಗಸ್ಟ್ 2ರಂದು ಮುಂಜಾನೆ ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ವಾಕಿಂಗ್‌ಗೆ ಹೋಗುತ್ತಿದ್ದ ಉತ್ತರ ಭಾರತ ಮೂಲದ ಮಹಿಳೆಯೊಬ್ಬರನ್ನು ಆರೋಪಿ ಬಲವಂತವಾಗಿ ತಬ್ಬಿ ಲೈಂಗಿಕ ಕಿರುಕುಳ ನೀಡಿದ್ದ. ದುಷ್ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಸ್ನೇಹಿತೆಯರೊಂದಿಗೆ ವಾಕಿಂಗ್ ಹೋಗುತ್ತಿದ್ದ ಮಹಿಳೆ, ಶುಕ್ರವಾರ ಮುಂಜಾನೆ ತನ್ನ ಸ್ನೇಹಿತೆಯರಿಗಾಗಿ ಕಾಯುತ್ತಿದ್ದರು. ಈ ವೇಳೆ ಬಂದಿದ್ದ ಆರೋಪಿ, ಹಿಂಬದಿಯಿಂದ ಮಹಿಳೆಯ ಕೈ ಹಿಡಿದು,ಒಂದು ಕೈಯಿಂದ ಆಕೆಯ ಬಾಯಿ ಮುಚ್ಚಿದ್ದ. ಈ ವೇಳೆ ಮಹಿಳೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೂ ಸಹ ಆಕೆಯನ್ನು ಹಿಂಬಾಲಿಸಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದ.
ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿಯ ವಿರುದ್ಧ ಬಿಎನ್ಎಸ್ ಕಾಯ್ದೆ 74 (ಮಹಿಳೆಯ ಮೇಲೆ ಕ್ರಿಮಿನಲ್ ಆಕ್ರಮಣ), 75 (ಲೈಂಗಿಕ ಕಿರುಕುಳ), 78 (ಹಿಂಬಾಲಿಸುವಿಕೆ), 79 (ಮಹಿಳೆಯ ಘನತೆಗೆ ಚ್ಯುತಿಯುಂಟು ಮಾಡಲು ಯತ್ನ) ಹಾಗೂ 126 (ಕಾನೂನಬದ್ಧ ಚಲನೆಗೆ ಸ್ವಯಂಪ್ರೇರಿತವಾಗಿ ಅಡ್ಡಿಪಡಿಸುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇಂದು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿ ಕ್ಯಾಬ್ ಚಾಲಕನಾಗಿದ್ದು, ವಿವಿಧ ಕಂಪನಿಗಳ ಉದ್ಯೋಗಿಗಳನ್ನು ಡ್ರಾಪ್ ಹಾಗೂ ಪಿಕ್ ಅಪ್ ಮಾಡುವ ಕೆಲಸ ಮಾಡಿಕೊಂಡಿದ್ದ. ಶುಕ್ರವಾರ ಮುಂಜಾನೆ ಯಾರೂ ಇರದಿದ್ದ ಸಂದರ್ಭದಲ್ಲಿ ಮಹಿಳೆಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
"ಘಟನೆಯ ಕುರಿತು ಮಾಹಿತಿ ತಿಳಿದಿದ್ದರೂ ಸಹ, ನೊಂದ ಮಹಿಳೆಯ ಮನವೊಲಿಸಿ, ಪ್ರಕರಣ ದಾಖಲಿಸಿಕೊಳ್ಳದೆ ಹಾಗೂ ಪ್ರಕರಣದ ತೀವ್ರತೆ ಅರಿತುಕೊಳ್ಳಲು ವಿಫಲವಾದ ಆರೋಪದಡಿ ಠಾಣೆಯ ಓರ್ವ ಎಎಸ್ಐ ಸಹಿತ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ" ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್.ಬಿ.ಜಗಲಾಸರ್ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ವಾಕಿಂಗ್ ಹೋಗುತ್ತಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಆರೋಪಿ ಬಂಧನ - sexual harassment