ದಾವಣಗೆರೆ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ನ್ಯಾಯಾಲಯ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಕೃತ್ಯಕ್ಕೆ ಸಹಕರಿಸಿದ 2ನೇ ಅಪರಾಧಿಗೆ 2 ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ ದಂಡ ಹಾಗೂ 3ನೇ ಅಪರಾಧಿಗೆ 1 ವರ್ಷ, 5 ಸಾವಿರ ರೂ ದಂಡ ವಿಧಿಸಲಾಗಿದೆ.
ಪ್ರಕರಣದ ವಿವರ: ಅಕ್ಟೋಬರ್ 20, 2020ರಂದು ರಾತ್ರಿ ಊಟ ಮಾಡಿ ಮಲಗಿದ್ದಾಗ ಓರ್ವ ಆರೋಪಿ ಬಾಲಕಿಗೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಆಕೆಯನ್ನು ಬಲವಂತವಾಗಿ ತನ್ನ ಬೈಕ್‌ನಲ್ಲಿ ಅಪಹರಿಸಿದ್ದ. ಈತನಿಗೆ ಇನ್ನಿಬ್ಬರು ಸಹಕರಿಸಿದ್ದರು. ವಿಚಾರ ತಿಳಿದು ಸಂಬಂಧಿಕರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನ ಪಿಐ ದೇವರಾಜ್ ಟಿ.ವಿ ಪ್ರಕರಣದ ತನಿಖೆ ಕೈಗೊಂಡಿದ್ದರು.